Advertisement
ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿದರೆ ಸಂತ್ರಸ್ತರಿಗೆ ಪಾಲಿಕೆಯೇ ಪರಿಹಾರ ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು ಎಂದು ಮಂಗಳವಾರದ ವಿಚಾರಣೆ ವೇಳೆ ಇಂಗಿತ ವ್ಯಕ್ತಪಡಿಸಿದ್ದ ಹೈಕೋರ್ಟ್, ಬುಧವಾರ ಈ ಕುರಿತು ಅಧಿಕೃತ ಆದೇಶ ಮಾಡಿದೆ.
Related Articles
Advertisement
ಈ ವೇಳೆ ಬಿಬಿಎಂಪಿ ಪರ ವಕೀಲರು ಪ್ರತಿಕ್ರಿಯಿಸಿ, ಈ ರೀತಿ ಪರಿಹಾರ ನೀಡುವುದಾರೆ ಅದು ದುರ್ಬಳಕೆಯಾಗುವ ಸಾಧ್ಯತೆಯಿದೆ. ವಾಹನ ಸವಾರರ ನಿರ್ಲಕ್ಷ್ಯ ಅಥವಾ ಹಾಗೂ ಅತಿ ವೇಗದ ಚಾಲನೆ ಸೇರಿದಂತೆ ಮತ್ಯಾವುದೇ ಕಾರಣದಿಂದಲೂ ಅಪಘಾತ ಸಂಭಿಸಿದರೆ ಅದಕ್ಕೆ ರಸ್ತೆ ಗುಂಡಿಯೇ ಕಾರಣ ಎಂದು ಹೇಳಿ ಪರಿಹಾರ ಕೇಳುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಗಮನಕ್ಕೆ ತಂದರು.
ಅದಕ್ಕೆ ನ್ಯಾಯಪೀಠ, ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ, ಅದು ಸಕಾರಣಗಳಿಂದ ಕೂಡಿದ್ದರೆ ಮತ್ತು ತೃಪ್ತಿಕರವಾದಲ್ಲಿ ನ್ಯಾಯಸಮ್ಮತವಾಗಿ ಪರಿಹಾರ ನೀಡಲು ಬಿಬಿಎಂಪಿ ಮುಕ್ತವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತು.
ಘನತೆಯಿಂದ ಬುದುಕುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸಂವಿಧಾನದ ಪರಿಚ್ಛೇದ 21 ಪ್ರತಿಪಾದಿಸುತ್ತದೆ. ಅದನ್ನು ವಿಸ್ತರಿಸಿ ವಿಶ್ಲೇಷಣೆ ಮಾಡಿರುವ ಸುಪ್ರೀಂ ಕೋರ್ಟ್, ಸುಸ್ಥಿತಿಯ ರಸ್ತೆಯಲ್ಲಿ ಸಂಚರಿಸುವುದು ಕೂಡ ವ್ಯಕ್ತಿಯ ಹಕ್ಕು ಎಂದು ವ್ಯಾಖ್ಯಾನಿಸಿದೆ.
ಅದಕ್ಕಾಗಿ ಜನರು ಸುರಕ್ಷಿತವಾಗಿ ನಡೆದಾಡಲು ಮತ್ತು ವಾಹನಗಳಲ್ಲಿ ಸಂಚಾರ ಮಾಡಲು ಸುಸ್ಥಿರ, ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿರುವುದು ಸರ್ಕಾರ ಹಾಗೂ ಪೌರ ಸಂಸ್ಥೆಗಳ ಜವಾಬ್ದಾರಿ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಸುಪ್ರೀಂ ಅಭಿಪ್ರಾಯ ಉಲ್ಲೇಖ: ಉತ್ತಮ ರಸ್ತೆಗಳನ್ನು ಹೊಂದುವುದು ನಾಗರಿಕರ ಮೂಲಭೂತ ಹಕ್ಕು. ಒಂದೊಮ್ಮೆ ರಸ್ತೆಗಳು ದುಸ್ಥಿತಿಯಲ್ಲಿದ್ದರೆ ಜನ ಸಾಮಾನ್ಯರ ಸಾಂವಿಧಾನಿಕ ಹಕ್ಕುನ್ನು ಕಸಿದುಕೊಂಡಂತಾಗುತ್ತದೆ. ಉತ್ತಮ ಗುಣಮಟ್ಟ ರಸ್ತೆ, ಅವುಗಳಿಗೆ ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕು. ಈ ವ್ಯವಸ್ಥೆ ಜನರಿಗೆ ದೊರೆಯದೇ ಹೋದರೆ ನಾಗರಿಕರನ್ನು ಅವರ ಹಕ್ಕಿನಿಂದ ವಂಚಿಸಿದಂತಾಗುತ್ತದೆ.
ಆ ಹಕ್ಕನ್ನು ಬಿಬಿಎಂಪಿ ಸೇರಿದಂತೆ ಯಾವುದೇ ಪೌರ ಸಂಸ್ಥೆ ಉಲ್ಲಂ ಸಿದರೆ ಸಂತ್ರಸ್ತರಿಗೆ ಸರ್ಕಾರ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳು ಪರಿಹಾರ ನೀಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿರುವುದನ್ನು ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ಉಲ್ಲೇಖೀಸಿದೆ.
ನ್ಯಾಯಾಲಯದ ಪ್ರಮುಖ ನಿರ್ದೇಶನಗಳು-ವಾರ್ಡ್ ಸಮಿತಿಗಳು ತಮ್ಮ ವಾರ್ಡ್‌ಗಳಲ್ಲಿ ರಸ್ತೆಗಳಲ್ಲಿರುವ ಗುಂಡಿಗಳ ಬಗ್ಗೆ ಮೊದಲು ಪರಿಶೀಲನೆ ನಡೆಸಬೇಕು. -ವಾರ್ಡ್ ಸಮಿತಿಗಳ ಮೇಲ್ವಿಚಾರಣೆಯಲ್ಲಿಯೇ ರಸ್ತೆ ಗುಂಡಿಗಳನ್ನು ಭರ್ತಿ ಮಾಡಬೇಕು. -ರಸ್ತೆ ಅಗೆಯುವ ವೇಳೆ ಸಂಬಂಧಪಟ್ಟ ಸಂಸ್ಥೆಯಗಳೊಂದಿಗೆ ಮಾಡಿಕೊಂಡ ಒಪ್ಪಂದ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂಬುದರ ಬಗ್ಗೆ ವಾರ್ಡ್ ಸಮಿತಿಗಳು ನಿಗಾವಹಿಸಬೇಕು. -ರಸ್ತೆ ಪರಿಸ್ಥಿತಿ ಹಾಗೂ ನಿರ್ವಹಣೆಯ ಸ್ಥಿತಿಗತಿ ಬಗ್ಗೆ ಪ್ರತಿ ತಿಂಗಳು ಪಾಲಿಕೆ ಆಯುಕ್ತರಿಗೆ ವಾರ್ಡ್ ಸಮಿತಿಗಳು ವರದಿ ಸಲ್ಲಿಸಬೇಕು. -ರಸ್ತೆ ದುರಸ್ತಿ ಕಾರ್ಯಗಳು ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಅದರಲ್ಲೂ ಅಂಧರು ಸೇರಿದಂತೆ ದಿವ್ಯಾಂಗರ, ಹಿರಿಯ ನಾಗರಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮೊಬೈಲ್ ಆ್ಯಪ್ ವ್ಯವಸ್ಥೆ ತನ್ನಿ: ಈಗಿರುವ ವೆಬ್‌ಸೈಟ್‌ನಲ್ಲಿ ರಸ್ತೆ ಹಾಳಾಗಿದ್ದರೆ ಮತ್ತು ಅವುಗಳನ್ನು ಸರಿ ಮಾಡದಿದ್ದರೆ, ಆ ಬಗ್ಗೆ ಫೋಟೋಗಳನ್ನು ಅಪ್‌ಲೋಡ್ ಮಾಡುವ ಅವಕಾಶ ಕೇವಲ ಅಧಿಕಾರಿಗಳಿಗೆ ಇದೆ. ಆದರೆ, ಈ ವಿಚಾರದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಖಾತರಿಪಡಿಸುವುದು ಬಿಬಿಎಂಪಿಯ ಜವಾಬ್ದಾರಿ. ಆದ್ದರಿಂದ ಬಿಬಿಎಂಪಿ ಕೂಡಲೇ ರಸ್ತೆ ದುರಸ್ತಿ ಕುರಿತು ಮೊಬೈಲ್ ಆ್ಯಪ್ ಅಥವಾ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರೂ ಫೋಟೋದೊಂದಿಗೆ ದೂರು ಸಲ್ಲಿಸಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು ನೀಡಿದ ದೂರುಗಳನ್ವಯ ಸೂಕ್ತ ಕ್ರಮ ಜರುಗಿಸಿ, ಆ ಕುರಿತು ದೂರುದಾರರಿಗೆ ಮಾಹಿತಿ ನೀಡಬೇಕು. ದೂರು ಸ್ವೀಕಾರ ವ್ಯವಸ್ಥೆ ರೂಪಿಸಿದ ನಂತರ ಆ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.