Advertisement
ಕೋವಿಡ್ 19, ಬದುಕಿಗೆ ಹೇಳಿಕೊಟ್ಟಿದ್ದೇನೆಂದು ಯೋಚಿಸುವಾಗ, ಬೀದಿಯಲ್ಲಿ ಕಂಡ ಅನೇಕ ವ್ಯಕ್ತಿಗಳು, ದೃಶ್ಯಗಳು ಅವಳಿಗೆ ನೆನಪಿಗೆ ಬರುತ್ತವೆ. ಇದನ್ನು ನಿರೂಪಿಸುತ್ತಿರುವ “ಅವಳು’, ಈ ಯಾವ ಪಾತ್ರದಲ್ಲಿ ಬೇಕಾದರೂ ಸೇರಿರಬಹುದು, ಸೇರಿ ಬದುಕನ್ನು ಹೊಸ ರೀತಿಯಲ್ಲಿ ನೋಡುತ್ತಿರಬಹುದು.*****
ಅಲ್ಲೊಬ್ಬಳು ಮುದುಕಿ, ಮುಚ್ಚಿದ ದೇವಸ್ಥಾನದ ಜಗುಲಿಯ ಮೇಲೆ ಕೂತಿದ್ದಾಳೆ. ಯಾರಾದರೂ ಸಿಕ್ಕರೆ ಮಾತನಾಡಬಹುದು ಎನ್ನುವ ಆಸೆ ಕಣ್ಣಲ್ಲಿ ಇಣುಕುತ್ತಿದೆ. ಅಲ್ಲಿಯೇ ಓಡಾಡುತ್ತಿದ್ದ ಸಾಧು ಸ್ವಭಾವದ ನಾಯಿಯೊಂದನ್ನು ಬಲವಂತವಾಗಿ ಹಿಡಿದು ಪಕ್ಕದಲ್ಲಿಯೇ ಕೂರಿಸಿ ಕೊಂಡಿದ್ದಾಳೆ. ಹಿಂದೊಮ್ಮೆ ಇದೇ ನಾಯಿಯನ್ನು ವಿನಾಕಾರಣ ಬೈಯು ತ್ತಿದ್ದಳು, ಹೊಡೆಯುತ್ತಿದ್ದಳು. ಹಾಗಾಗಿ ಅದು ಕೊಂಚ ಹೆದರಿದಂತೆ ಕಾಣುತ್ತಿದೆ. ಅಸಹನೀಯವಾದ ಒಂಟಿತನದಲ್ಲಿ ಬೇಯುತ್ತಿರುವ ಮುದುಕಿಗೆ, ನಾಯಿಯ ಸಾಂಗತ್ಯ ಕೊಂಚ ನೆಮ್ಮದಿ ನೀಡಿದೆ. ಪ್ರಾಣಿ ಪ್ರೀತಿಯೆಂದ ರೇನು ಎನ್ನುವುದು ತಡವಾಗಿ ಯಾದರೂ ತಿಳಿಯುತ್ತಿದೆ!
*****
ಅಲ್ಲೊಬ್ಬ ಹುಡುಗ, ಅಮ್ಮನಿಂದ ಅಡುಗೆ ಮಾಡಿಸಿ, ಪೊಟ್ಟಣ ಗಳನ್ನು ಕಟ್ಟಿ ಬೀದಿಯಲ್ಲಿ ನಿಂತವರನ್ನು ಹುಡು ಕುತ್ತಿದ್ದಾನೆ. ಇಂತಹ ಕಷ್ಟದ ದಿನಗಳಲ್ಲಿ ನಾಲ್ಕಾರು ಜನರಿಗೆ ಊಟ ಕೊಡುತ್ತಿ ದ್ದೇನೆ, ಕಷ್ಟಕಾಲದಲ್ಲಿ ನೆರವಾಗುತ್ತಿದ್ದೇನೆ, ಎಂಬ ಹೆಮ್ಮೆ ಅವನದ್ದು.
*****
ಕೆಲಸದವರ ಮೇಲೆ ಜೋರು ಮಾಡಿ, ಮನೆಯನ್ನು ಎರಡೆರಡು ಸಲ ಸಾರಿಸಲು, ಗುಡಿಸಲು ಹೇಳುತ್ತಿದ್ದ ನೆರೆಮನೆಯ ಹೆಂಗಸು, ಈಗ 3 ದಿನಕ್ಕೊಮ್ಮೆ ಈ ಕೆಲಸ ಮಾಡಿದರೆ ಹೆಚ್ಚು! ಇನ್ನುಮುಂದೆ, ಕೆಲಸದವರ ಜೊತೆ ತಾನೂ ಕೈಗೂಡಿಸಬೇಕು ಎಂದವಳಿಗೆ ಅನ್ನಿಸುತ್ತಿದೆ!
*****
ಮಕ್ಕಳಿಗೆ ಕತೆ ಹೇಳಿ ಹೇಳಿ ಸೋತ ಹೆಂಗಸೊಬ್ಬಳು, ತನ್ನ ತಂದೆ ಬಾಲ್ಯದಲ್ಲಿ ಹೇಳುತ್ತಿದ್ದ ಕಥೆಯೊಂದನ್ನು ನೆನೆಯುತ್ತಿದ್ದಾಳೆ. ಆ ಕತೆಯೋ ಮುಗಿಯುವುದೇ ಇಲ್ಲ. ರಾಶಿ ರಾಶಿಯಾಗಿ ಬಿದ್ದ ಅಕ್ಕಿ ಕಾಳು, ಅದನ್ನು ತಿನ್ನಲು ಬರುವ ಹಕ್ಕಿಗಳು. ಒಂದು ಹಕ್ಕಿ ಬಂತು ಒಂದು ಅಕ್ಕಿ ಕಾಳು ತಿಂತು, ಇನ್ನೊಂದು ಹಕ್ಕಿ ಬಂತು. ಇನ್ನೊಂದು ಅಕ್ಕಿ ಕಾಳು ತಿಂತು, ಮತ್ತೂಂದು ಹಕ್ಕಿ ಬಂತು, ಮತ್ತೂಂದು ಅಕ್ಕಿ ಕಾಳು ತಿಂತು… ಹೀಗೆ! ಕತೆಗಳನ್ನೇ ಹೇಳಲಾಗದ ಸ್ಥಿತಿ ತಲುಪುವ ಮುನ್ನ, ಓದಬೇಕಾದದ್ದು ಬಹ ಳಷ್ಟಿದೆ ಎಂದು, ಮೇಜಿನಲ್ಲಿ ಪುಸ್ತಕಗಳನ್ನು ಜೋಡಿಸಿಟ್ಟುಕೊಳ್ಳುತ್ತಾಳೆ.
*****
ಮನೆಯೆದುರಿನ ಉದ್ಯಾನವನ ಶಾಂತ, ಪ್ರಶಾಂತವಾಗಿತ್ತು.ಅದೆಷ್ಟೋ ಬಗೆಯ ಹಕ್ಕಿಗಳನ್ನು ವಾಕ್ ಹೋಗಬೇಕಾದರೆ ಹಿಂದೆಲ್ಲ ನೋಡುತ್ತಿದ್ದಳು. ಪುಟ್ಟ ಪುಟ್ಟ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ, ಗುಬ್ಬಿಗಳು ಮೈ ತೊಳೆಯುವುದನ್ನು ಕಂಡರೆ ಏನೋ ಖುಷಿ! ಅಲ್ಲೊಂದು ಗಿಣಿ, ಕೋಗಿಲೆ ಎಂದು ಮರಗಳಲ್ಲಿ ಕಂಡ ಹಕ್ಕಿಗಳ ಬಗ್ಗೆ ಹೇಳುವಾಗ, ಥೇಟ್ ಹುಡುಗಿಯಾಗಿಬಿಡುತ್ತಿದ್ದಳು. ಎಲ್ಲರ ಮನೆಯ ಕಾಂಪೌಂಡಿ ನೊಳಗೆ ಚಕ್ಕೋತ, ಹಲಸು, ಮಾವು, ದಾಳಿಂಬೆ, ಸಂಪಿಗೆ, ಹೂವಿನ ಗಿಡಗಳು. ಬೀದಿಗೂ ಚಾಚುತ್ತಿದ್ದ ಕೊಂಬೆಗಳಿಂದ ಒಂದೆರಡು ಸಂಪಿಗೆ ಕಿತ್ತು, ಹಾದಿ ಯುದ್ದಕ್ಕೂ ಅದರ ಘಮಲನ್ನು ಹೀರುತ್ತಾ ಹೋಗುವುದು ರೂಢಿಯಾಗಿತ್ತು.
*****
ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಎಂಬ ಬಸವ ಣ್ಣನ ವಚನವನ್ನು, ಹತ್ತಾರು ವರ್ಷ ಪಾಠ ಮಾಡಿದವಳು, ಒಮ್ಮೊಮ್ಮೆ ದಿಗಿಲು ಪಡು ತ್ತಾಳೆ. ತನ್ನ ಮಕ್ಕಳಾದರೂ ಜೊತೆಯಲ್ಲಿವೆ. ಯಾರೂ ಇಲ್ಲದ ಒಂಟಿ ಜೀವಗಳು ಈ ಭೂಮಿಯಲ್ಲಿ ಅದೆಷ್ಟಿವೆ? ಅವರಿಗಾಗುವ ತಲ್ಲಣವೇನು ಎಂಬ ಅರಿವು ಮೂಡಿದ ತಕ್ಷಣ, ಕೆಲವರಿಗಾದರೂ ಫೋನ್ ಮಾಡಿ, ಯೋಗಕ್ಷೇಮ ವಿಚಾರಿಸುತ್ತಾಳೆ. ಮಾತಾ ಡಲು ಪುರುಸೊತ್ತಿಲ್ಲ ಎನ್ನುವಂತಿದ್ದ ಅವಳ ದಿನಚರಿಗೆ, ಈಗ ಮಾತುಗಳ ಕೈಕಾಲು ಮೂಡುತ್ತಿದೆ. ಮಕ್ಕಳಿಗೆ ಬಸವಣ್ಣನವರ “ಏನು ಬಂದಿರಿ, ಹದುಳವೇ ಎಂದರೆ ನಿಮೈಸಿರಿ ಹಾರಿಹೋಹುದೇ? ಕುಳ್ಳಿರಿ, ಎಂದರೆ ನೆಲ ಕುಳಿ ಹೋಹುದೇ? ಒಡನೆ ನುಡಿದಡೆ ಸಿರ ಹೊಟ್ಟೆ ಒಡೆವುದೇ?’- ವಚನವನ್ನು ಕಲಿಸುತ್ತಿದ್ದಾಳೆ.
*****
ಬಯಲು ಸೀಮೆಯವರು, ಯಾವತ್ತೂ ಅಡುಗೆಗೆ ತರಕಾರಿ ಗಳನ್ನು ನೆಚ್ಚಿಕೊಂಡವರಲ್ಲ. ವಾರಕ್ಕೊಮ್ಮೆ ಸಂತೆಯಲ್ಲಿ ಸಿಗುವ ಎರಡೋ ಮೂರೋ ತರಕಾರಿಗಳನ್ನು ಅವಳಮ್ಮ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದಳು. ತರಕಾರಿ ಇಲ್ಲದ ಕಾಲದಲ್ಲಿ, ಮನೆಗೆ ಯಾರಾದರೂ ಬಂದರೆ ಆಲೂಗಡ್ಡೆ, ಈರುಳ್ಳಿ ಹುಳಿ! ಆ ಕಾಲದಲ್ಲಿ ಅದೊಂದು ಅದ್ಭುತವೆಂದು ಎಲ್ಲರೂ ಭಾವಿಸಿದ್ದರು. ಹಾಗಾಗಿಯೇ ಅವಳಿಗೆ ಹುಣಸೆಹಣ್ಣು, ಮೆಣಸಿನಕಾಯಿ, ತೆಂಗಿನಕಾಯಿ, ವಿವಿಧ ಬಗೆಯ ಕಾಳುಗಳು, ಸೊಪ್ಪಿದ್ದರೆ ಎಲ್ಲವೂ ಇದ್ದಂತೆ! ಇನ್ನು, ತರಕಾರಿ ಸಿಪ್ಪೆಗಳಲ್ಲಿ ಮಾಡುವ ಅಡುಗೆಯನ್ನು ಅವಳು ತಿಂದೇ ಇರಲಿಲ್ಲ. ಆದರೆ, ಫೇಸ್ ಬುಕ್‌ನ ಅನೇಕ ಗೆಳತಿಯರು, ಅಡುಗೆಯಲ್ಲಿ ರುಚಿಯ ಜೊತೆಗೆ, ಬದುಕಿನಲ್ಲಿ ನಿರಾಕರಿಸುವುದೇನೂ ಇಲ್ಲ ಎನ್ನುವುದನ್ನೂ ಕಲಿಸುತ್ತಿದ್ದಾರೆ.
*****
ಮೊನ್ನೆ ಮಗಳು ತೆಂಗಿನಕಾಯಿ ತುರಿಯುವಾಗ ಕರಟದ ಭಾಗದವರೆಗೂ ತುರಿದಿದ್ದನ್ನು ಕಂಡು ರೇಗಿದ್ದಳು. ತೆಂಗಿನ ಸೀಮೆಯಲ್ಲಿ ಬೆಳೆದ ಅವಳಿಗೆ, ಕರಟದೊಳಗೆ ಇನ್ನೂ ಕಾಯಿಯಿದೆ ಎನ್ನುವಾಗಲೇ ತುರಿಯುವುದನ್ನು ನಿಲ್ಲಿಸಿ, ತೆಗೆದೆಸೆಯುವುದು ರೂಢಿ. “ಅಮ್ಮಾ, ನಿಂಗೆ ತೆಂಗಿನಕಾಯಿ ಬೆಲೆ ಗೊತ್ತಿದೆಯಾ? ಇದರಲ್ಲಿ ಇನ್ನೂ ಎಷ್ಟೊಂದು ಕಾಯಿ ಇದೆ, ದಂಡ ಮಾಡಬೇಕಾ?’ ಎಂದಾಗಲೇ ಅವಳಿಗರಿವಾಗಿದ್ದು. ಮಗಳು ಪಾಠವೊಂದನ್ನು ಹೇಳಿಕೊಟ್ಟಿದ್ದಳು!
*****
ಬದುಕಿನ ಅನಿಶ್ಚಿತತೆ ಮನುಷ್ಯನನ್ನು ಎಷ್ಟು ಆತಂಕಕ್ಕೆ ಒಡ್ಡುತ್ತದೆ? ಈ ಕೋವಿಡ್ 19 ಕಾಲವೂ ಹಾಗೇ. ಎಷ್ಟೇ ಸವಾಲುಗಳನ್ನು ಒಡ್ಡಿದರೂ, ತನ್ನೊಳಗನ್ನು ತಾನು ನೋಡಿಕೊಳ್ಳುವುದಕ್ಕೆ, ಅಂತರಂಗದ ನಿರ್ಮಲೀಕರಣಕ್ಕೆ, ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಇಂಬಾಗಿದೆ ಎಂದೆನಿಸುತ್ತಿದೆ ಅವಳಿಗೆ… * ಎಂ.ಆರ್. ಕಮಲ