Advertisement

ಅಜ್ಜಿಯಿಂದ ಕಲಿತ ಪಾಠಗಳು

11:07 PM May 02, 2019 | Team Udayavani |

ನಾನು ಹುಟ್ಟಿ ಬೆಳೆದದ್ದು ನನ್ನ ಅಜ್ಜಿಮನೆಯಲ್ಲಿ. ನನಗೆ ನನ್ನ ಅಜ್ಜಿ ಎಂದರೆ ಬಲು ಪ್ರೀತಿ. ನನ್ನ ಅಜ್ಜಿಯೊಬ್ಬರು ಧೀರ ಮಹಿಳೆ. ಅವರು ಸತ್ಯ, ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾಗಿದ್ದರು. ನಾವಿಬ್ಬರು ಒಳ್ಳೆಯ ಸ್ನೇಹಿತೆಯರಂತೆ‌ ಇದ್ದವರು. ಅವರು ನನ್ನನ್ನು ನನ್ನ ಅಣ್ಣಂದಿರನ್ನು ಆಡಿ ಬೆಳೆಸಿದ ರೀತಿ ಬಹಳ ಸುಂದರವಾಗಿತ್ತು. ನಾವು ಏನಾದರೂ ತಪ್ಪು ಮಾಡುತ್ತಿದ್ದರೆ ಗದರುತ್ತಿದ್ದರು. ಮತ್ತೆ ಪುನಃ ಬುದ್ಧಿಹೇಳಿ ಸರಿದಾರಿಗೆ ತರುತ್ತಿದ್ದರು. ನನ್ನ ಅಜ್ಜಿ ಅವರಿಗೆ ಬಂದ ಪೆನ್ಶನ್‌ ಹಣದಲ್ಲಿ ತನಗಾಗಿ ಏನನ್ನೂ ಖರ್ಚುಮಾಡದೆ ಆ ಹಣದಲ್ಲಿ ನಮಗೆ ಬೇಕಾದ ಪುಸ್ತಕ, ಬಟ್ಟೆಬರೆ, ತಿಂಡಿಗಳನ್ನು ತೆಗೆದುಕೊಡುತ್ತಿದ್ದರು.

Advertisement

ಅವರು ನಮಗೆ ಹೇಳಿಕೊಟ್ಟ ನಡೆ-ನುಡಿ, ಒಳ್ಳೆಯ ಪಾಠಗಳನ್ನು ನಾನು ಇಂದಿಗೂ ನೆನೆಯುತ್ತೇನೆ ಹಾಗೂ ಇಂದಿಗೂ ಪಾಲಿಸುತ್ತೇನೆ. ಅವರು ಇದ್ದಂತಹ ರೀತಿ, ನಡೆಯುತ್ತಿದ್ದ ಹಾದಿ ನಮಗೆಲ್ಲರಿಗೂ ದಾರಿದೀಪ. ನನಗೆ, ನನ್ನ ಕೆಲಸಕ್ಕೆ ಅವರೇ ಸ್ಫೂರ್ತಿ. ಆದರೆ, ವಿಧಿಯ ನಿಯಮ-ಅವರಿಗೆ ಅನಾರೋಗ್ಯ ಕಾಡಿತ್ತು. ನಾವು ದೊಡ್ಡವರಾದಂತೆ ಅವರಿಗೆ ಅನಾರೋಗ್ಯವು ಹೆಚ್ಚಾಗತೊಡಗಿತ್ತು. ಆದರೂ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದರು. ಅವರು ತಮ್ಮ ಕಾಯಕದಲ್ಲಿ ದೇವರನ್ನು ನೆನೆಯುತ್ತಿದ್ದರು. ನನಗೆ ಚಿಕ್ಕಂದಿನಿಂದಲೂ ಅವರೇ ತಲೆಬಾಚಿ ಕೂದಲು ಕಟ್ಟುತ್ತಿದ್ದರು. ಇಂದಿಗೂ ಆ ಎಲ್ಲ ಮಧುರ ಕ್ಷಣಗಳನ್ನು ನಾನು ನೆನೆಯುತ್ತೇನೆ. ಆದರೆ, ಏನು ಮಾಡುವುದು, ಆ ವಿಧಿಯ ಲೀಲೆಗೆ ಅವರ ಅನಾರೋಗ್ಯ ಕಾರಣದಿಂದ ಅವರು ಸ್ವರ್ಗ ಸೇರಿದರು. ಆದರೆ, ನಾನು ಇಂದಿಗೂ ಅವರನ್ನು ನೆನೆಯುತ್ತೇನೆ. ಅವರು ಇಂದಿಗೂ ನಮ್ಮ ಜೊತೆ ಇದ್ದಾರೆ ಅನ್ನುವಂತಹ ಭಾವನೆ ನನ್ನದು. ಅವರು ಮಾಡಿದಂತಹ ಸಾಧನೆ, ಇದ್ದಂತಹ ರೀತಿ ನಮಗೆ ಎಲ್ಲರಿಗೂ ಮಾದರಿ.
ನಾನು ದೇವರಲ್ಲಿ ಏಳೇಳು ಜನ್ಮದಲ್ಲಿ ಅವರೇ ನನ್ನ ಅಜ್ಜಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಇವತ್ತು ನಾನು ಜೀವನದಲ್ಲಿ ಏನಾಗಿದ್ದೇನೋ ಅದು ಅವರಿಂದ, ಅವರು ಕಲಿಸಿದ ಪಾಠಗಳಿಂದಲೇ. ಅವರ ನನ್ನ ಒಡನಾಟ ನನ್ನ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತದೆ.

-ದಿಶಾ
ಎಲ್‌ಎಲ್‌ಬಿ-ಅಂತಿಮ ವರ್ಷ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next