ಮುದ್ದೇಬಿಹಾಳ: ಉತ್ತರ ಕರ್ನಾಟಕದ ಮತದಾರರು ಕಾಂಗ್ರೆಸ್‌ಗೆ ಹೆಚ್ಚಿನ ಮಹತ್ವ ನೀಡಿದ್ದರೂ ಕಾಂಗ್ರೆಸ್ ಪಕ್ಷ ಇಲ್ಲಿನ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಮಾರತಮ್ಯ ಮಾಡುತ್ತಾ ಬಂದಿದೆ. ಅಧಿಕಾರ ಪ್ರಭುತ್ವದಿಂದಲೇ ಕ್ಷೇತ್ರ ಅಭಿವೃದ್ಧಿ ಸಾಧ್ಯವೆಂಬ ವಿಷಯವನ್ನು ಅರಿತು ಉತ್ತರ ಕರ್ನಾಟಕದ ಜನರು ಎಚ್ಚೆತ್ತುಕೊಂಡು
ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ನೂತನ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಮಾರುತಿ ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇವಲ 30 ಶಾಸಕರನ್ನು ಇಟ್ಟುಕೊಂಡು ಇಡಿ ರಾಜ್ಯಕ್ಕೆ ನಾಯಕರಾಗುವ ಹಕ್ಕು
ಕುಮಾರಸ್ವಾಮಿಗಿಲ್ಲ. ಕುತಂತ್ರ ರಾಜಕಾರಣಿದಿಂದ ಸರಕಾರ ರಚನೆಗೆ ಮುಂದಾಗಿರುವ ಅವರ ಸರಕಾರಕ್ಕೆ ಹೆಚ್ಚಿನ ಆಯಸ್ಸು ಇಲ್ಲಾ ಎಂದರು.
ರಾಜ್ಯದ ಜನರ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ರಾಜ್ಯ ನಾಯಕನ ಸಿದ್ಧಾಂತವಾಗಿದೆ. ಆದರೆ ಕುಮಾರಸ್ವಾಮಿ ಅವರು ಕೇವಲ ಒಕ್ಕಲಿಗರ ಸಮುದಾಯದ ನಾಯಕನಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಜನ ವಿರೋಧ ಸರಕಾರ ಮಾಡಲಿದ್ದಾರೆ. ಆದರೆ ಅನೇಕ ಕಾಂಗ್ರೆಸ್ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು ಹೈಕಮಾಂಡ್ ಆದೇಶದಂತೆ ಮೂಕರಾಗಿ ವರ್ತಿಸುತ್ತಿದ್ದಾರೆ. ಆದರೆ ಇನ್ನೂ ಮೂರೇ ತಿಂಗಳಲ್ಲಿ ಬಿಜೆಪಿ ಸರಕಾರ ರಚಿಸಲಿದ್ದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯ ಮನೋಹರ ತುಪ್ಪದ ಮಾತನಾಡಿ, ಶಾಸಕರಾಗಿ ಆಯ್ಕೆಯಾಗಿ ಕೆಲ ದಿನಗಳಲ್ಲಿ ಪಟ್ಟಣದ ವಿವಿಧ ಬಡವಾಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ ಮೊದಲ ಶಾಸಕ ನಡಹಳ್ಳಿಯವರು. ಇಂತಹ ನಾಯಕತ್ವಕ್ಕಾಗಿ ಮುದ್ದೇಬಿಹಾಳ ಕ್ಷೇತ್ರ ಮಿಡಿಯುತ್ತಿತ್ತು. ಮುಂಬರುವ ದಿನಗಳಲ್ಲಿ ಮುದ್ದೇಬಿಹಾಳ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದು ಹೇಳಿದರು.
ಮಹಾದೇವ ಶಾಸ್ತ್ರಿಯವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯರಾದ ರಾಜು ಹೊನ್ನುಟ್ಟಗಿ, ಶರಣು ಬೂದಿಹಾಳಮಠ, ಜಿ.ಡಿ. ಪವಾರ, ಸಂಗಯ್ಯ ಆಲೂರಮಠ, ಎಂ.ಜಿ. ಹಿರೇಮಠ, ಅಂಗಯ್ಯ ಅಬ್ಬಿಹಾಳ, ಎಂ.ಬಿ. ರಾಂಪುರ, ಪವಾಡೆಪ್ಪ ಬಲದಿನ್ನಿ, ಐ.ಬಿ. ಹಿರೇಮಠ ವೇದಿಕೆಯಲ್ಲಿದ್ದರು. ಮಾಜಿ ಸೈನಿಕ ಐ.ಆರ್. ಹಿರೇಮಠ
ಸ್ವಾಗತಿಸಿದರು. ಡಿ.ಎಚ್. ಚಳಗೇರಿ ನಿರೂಪಿಸಿದರು.