Advertisement

ಇಕ್ಕಟ್ಟಿನಲ್ಲಿ ಪಾಠ, ಬಯಲಲ್ಲೇ ಬಿಸಿಯೂಟ

04:25 PM Jun 30, 2018 | Team Udayavani |

ತಿಪಟೂರು: ಕೇವಲ ಎರಡು ಕೊಠಡಿಯಲ್ಲಿ ಪಾಠ, ಶಿಕ್ಷಕರು, ಬಾಲಕರು, ಬಾಲಕಿಯರಿಗೆ ಒಂದೇ ಶೌಚಾಲಯ, ಬಯಲಲ್ಲೇ ಕುಳಿತು ಊಟ ಮಾಡುವುದು, ಇಕ್ಕಟ್ಟಿನಲ್ಲಿ ಕುಳಿತುಕೊಂಡು ಮಕ್ಕಳು ಪಾಠ ಕೇಳುವುದು. ಶಿಥಿಲ ಕಟ್ಟಡದಲ್ಲಿ ಭಯಭೀತಿಯಲ್ಲಿ ಶಿಕ್ಷಕರು ಬೋಧಿಸುವುದು. ಇವುಗಳು ನಗರ ಸಮೀಪದ ಮತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಜುನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿತ್ಯ ಕಂಡು ಬರುವ ದೃಶ್ಯಗಳು.

Advertisement

ನಿತ್ಯ ಕಿರಿಕಿರಿ: ಈ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ ಯವರೆಗೆ 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಇರುವುದು ಕೇವಲ ಎರಡೇ ಕೊಠಡಿಗಳು. ಇವು ಸಹ ಮಕ್ಕಳು ಕುಳಿತುಕೊಳ್ಳಲು ಸಾಧ್ಯವಿಲ್ಲದಷ್ಟು ಕಿರಿದಾಗಿದ್ದು, ಪ್ರತಿದಿನ ಇಕ್ಕಟ್ಟಿ ನಲ್ಲಿಯೇ ಕುಳಿತು ಪಠ ಕೇಳಬೇಕಾದ ದುಸ್ಥಿತಿ ಇದೆ.

ಶಿಥಿಲ ಕಟ್ಟಡ: ಶಾಲೆಯ ಪಕ್ಕದಲ್ಲಿ ತೆಂಗು ನಾರಿನ ಮಂಡಳಿಗೆ ಸೇರಿದ ಹಳೇ ಕಟ್ಟಡದಲ್ಲಿ 4 ಹಾಗೂ 5ನೇ ತರಗತಿ ಮಕ್ಕಳಿಗೆ ತರಗತಿ ನಡೆಸಲಾಗುತ್ತದೆ. ಆದರೆ, ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯ ಲ್ಲಿದ್ದು, ಬಿರುಗಾಳಿ ಮಳೆ ಸುರಿದರೆ ಮೇಲ್ಛಾವಣಿ ಕುಸಿದು ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಇಂತಹ ದುಸ್ಥಿತಿಯಲ್ಲಿ ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಿದೆ.

ಅತ್ಯುತ್ತಮ ಪರಿಸರ ಮತ್ತು ಶಿಕ್ಷಣ ವ್ಯವಸ್ಥೆ ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮೂವರು ಶಿಕ್ಷಕರಿದ್ದಾರೆ. ರಾಷ್ಟ್ರೀಯ ಹಬ್ಬಗಳು, ಕ್ರೀಡೆ, ಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಆದರೆ, ಸೌಲಭ್ಯಗಳು ಮಾತ್ರ ಮರೀಚೆಕೆಯಾಗಿದೆ.

ಒಂದೇ ಶೌಚಾಲಯ: ಕೊಠಡಿ ಸಮಸ್ಯೆ ಒಂದೆಡೆಯಾದರೆ ಶಾಲೆ ಯಲ್ಲಿರುವ 90 ಮಕ್ಕಳಿಗೆ ಒಂದೇ ಶೌಚಾಲಯವಿದೆ. ಬಾಲಕರು, ಬಾಲಕಿಯರು ಹಾಗೂ ಶಿಕ್ಷಕರು ಇದನ್ನೇ ಅವಲಂಬಿಸ ಬೇಕಾಗಿದೆ. ಇದರಿಂದ ವಿದ್ಯಾರ್ಥಿನಿಯರು ನಿತ್ಯ ಮುಜುಗರ ಅನುಭವಿ ಸುವಂತಾಗಿದೆ ಎಂದು 5ನೇ ತರಗತಿ ವಿದ್ಯಾರ್ಥಿನಿ ಲೋಕೇಶ್ವರಿ ಅವಲತ್ತುಕೊಂಡಿದ್ದಾರೆ.

Advertisement

ಬಿಸಿಯೂಟಕ್ಕೂ ಕೊಠಡಿಯಿಲ್ಲ: ಬಿಸಿಯೂಟ ತಯಾರಿಸಲು ಸೂಕ್ತ ಜಾಗವಿಲ್ಲದೇ ಶಾಲಾ ಆವರಣದಲ್ಲಿಯೇ ಮಕ್ಕಳನ್ನು ಕೂರಿಸಿ ಊಟ ಬಡಿಸಲಾಗುತ್ತಿದೆ. ಬಯಲಲ್ಲೇ ಕುಳಿತು ಊಟ ಮಾಡುವುದರಿಂದ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ಈ ಅವ್ಯವಸ್ಥೆ ಯಿಂದಾಗಿ ಮಕ್ಕಳು ಈ ಶಾಲೆಗೆ ದಾಖಲಾಗಲು ಹಿಂದೇಟು ಹಾಕು ತ್ತಿದ್ದಾರೆ. ಶಾಲೆ ದುಸ್ಥಿತಿ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಇಲ್ಲ ಎಂದು ಪೋಷಕರು ಅವಲತ್ತು ಕೊಂಡಿದ್ದಾರೆ.

ಮನವಿಗೆ ಸ್ಪಂದನೆಯಿಲ್ಲ: ಈ ಸರ್ಕಾರಿ ಶಾಲೆ ಉತ್ತಮ ಪರಿಸರ ಹೊಂದಿದ್ದರೂ ಕೊಠಡಿಗಳ ಕೊರತೆಯಿಂದ ಪೋಷಕರು ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಹಿಂದಿನ ಶಾಸಕರು ಹಾಗೂ ಶಿಕ್ಷಣ ಇಲಾಖೆ ಮತ್ತು ಮತ್ತಿಹಳ್ಳಿ ಗ್ರಾಪಂಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜ ನವಾಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ಭರವಸೆ: ಈ ಕುರಿತು ಪ್ರತಿಕ್ರಿಯಿಸಿರುವ ಜಿಪಂ ಸದಸ್ಯ ಜಿ. ನಾರಾಯಣ್‌, ಶಾಲೆಗೆ ಭೇಟಿ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದಾದರೂ ಅನುದಾನದಲ್ಲಿ ಕೊಠಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಂಜುನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಇಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. 90 ಮಕ್ಕಳಿಗೆ ಕೇವಲ ಎರಡು ಕೊಠಡಿಗಳು ಮಾತ್ರ ಇವೆ. ಶಿಥಿಲಗೊಂಡಿರುವ ಕಟ್ಟಡದಲ್ಲಿ ಬೋಧನೆ ಮಾಡಲು ನಮಗೆ ಭಯವಾಗುತ್ತಿದೆ. ಆದರೆ, ವಿಧಿ ಇಲ್ಲದೆ ಈ ಕಟ್ಟಡದಲ್ಲೇ ತರಗತಿಗಳನ್ನು ನಡೆಸುವಂತಾಗಿದೆ.
ವಸಂತಕುಮಾರ್‌, ಮುಖ್ಯ ಶಿಕ್ಷಕ

ಈ ಶಾಲೆಯ ಸಮಸ್ಯೆ ಬಗ್ಗೆ ಮಾಹಿತಿ ಲಭ್ಯವಿದ್ದು, ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ನಮ್ಮ ಇಲಾಖೆಯಲ್ಲಿ ನೂತನ ಕೊಠಡಿ ನಿರ್ಮಿಸಲು ಯಾವುದೇ ಅನುದಾನವಿಲ್ಲದ ಕಾರಣ ನಗರದ ಹಲವು ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಇಲ್ಲಿರುವ ತೆಂಗು ನಾರಿನ ಮಂಡಳಿಗೆ ಸೇರಿರುವ ಹಳೇ ಕಟ್ಟಡವನ್ನೇ ದುರಸ್ತಿ ಮಾಡಿಸಿಕೊಂಡು ಬಳಸಿಕೊಳ್ಳಿ ಎನ್ನುತ್ತಾರೆ. ಆದರೆ, ಈ ಕಟ್ಟಡ ಶಾಲೆಗೆ ಸಂಬಂಧವಿಲ್ಲದ ಕಾರಣ ದುರಸ್ತಿ ಮಾಡಲು ಯಾರು ಮುಂದೆ ಬರುತ್ತಿಲ್ಲ.
ಮಂಗಳಗೌರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ

„ ಬಿ.ರಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next