ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯ ಸಿಂಧೋಳ್ ಕಾಲೋನಿಯಲ್ಲಿರುವ ಸ.ಕಿ.ಪ್ರಾ. ಶಾಲೆಯ ಗೋಡೆ ಮತ್ತು ಬುನಾದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಭಯದಲ್ಲಿಯೇ ಓದಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, 1ರಿಂದ 5ನೇ ತರಗತಿಯಲ್ಲಿ ಒಟ್ಟು 34 ವಿದ್ಯಾರ್ಥಿಗಳು ವಿದ್ಯಾಭ್ಯಾಸಮಾಡುತ್ತಿದ್ದು, ಮೂರು ಕೊಠಡಿಗಳ ಒಳಭಾಗದ ಗೋಡೆಗಳಲ್ಲಿ ಬಿರುಕುಬಿಟ್ಟಿದ್ದು ಯಾವ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಬೀಳುತ್ತದೆ ಎನ್ನುವ ಆತಂಕ ಪಾಲಕರು ಮತ್ತು ಶಿಕ್ಷಕರನ್ನು ಕಾಡುತ್ತಿದೆ. ಗ್ರಾಮದ 1ನೇ ವಾಡ್‌ನಲ್ಲಿರುವ ಸಿಂಧೋಳಿ ಕಾಲೋನಿಯಲ್ಲಿರುವ ಅಲೆಮಾರಿ ಜನಾಂಗದ ಮಕ್ಕಳು ಹೆಚ್ಚಿದ್ದು, ಈ ಕಾಲೋನಿಯಿಂದ ಎರಡು ಕಿ.ಮೀ. ದೂರದಲ್ಲಿರುವ ಸರ್ಕಾರಿ ಶಾಲೆಗಳಿಗೆ ಇಲ್ಲಿನ ನಿವಾಸಿಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಕಾಲೋನಿಯಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 8.75ಲಕ್ಷ ರೂ.ಗಳಲ್ಲಿ 2009-10ನೇ ಸಾಲಿನಲ್ಲಿ ಈ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೇವಲ 10 ವರ್ಷಗಳಲ್ಲಿಯೇ ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಕಟ್ಟಡದ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಶಿಥಿಲಾವಸ್ಥೆಗೊಂಡಿರುವ ಕಟ್ಟದ ಕೆಳಗೆ ತಮ್ಮ ಮಕ್ಕಳು ಓದುತ್ತಿರುವುದನ್ನು ಮನಗಂಡ ಪಾಲಕರು ಈ ಶಾಲೆ ಬಿಡಿಸಿ ಬೇರೆ ಶಾಲೆಗೆ ಕಳುಹಿಸಲು ದೂರು ಇರುವುದರಿಂದ ಅನಿವಾರ್ಯವಾಗಿ ಇದೇ ಶಾಲೆಗೆ ಮಕ್ಕಳನ್ನು ಕಳುಹಿಸುವ ಪರಿಸ್ಥಿತಿ ಇದೆ. ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರು ಕೂಲಿ ನಾಲಿಮಾಡಿ ಜೀವನ ನಡೆಸುವವರಾಗಿದ್ದು, ಜನ ಪ್ರತಿನಿಧಿಗಳನ್ನಾಗಲಿ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನಾಗಲಿ ಕೇಳಲೂ ಆಗದೆ ತಮ್ಮ ಮಕ್ಕಳನ್ನು ಶಾಲೆ ಬಿಡಿಸಲೂ ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ತಮ್ಮ ಮಕ್ಕಳಿಗೆ ಯಾವ ಕಾಲದಲ್ಲಿ ಆಪತ್ತು ಒದಗಿ ಬರುತ್ತದೆಯೋ ಎನ್ನುವ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ನಾವು ಕೂಲಿ ಮಾಡಲು ಬೆಳಗ್ಗೆ ಹೋದವರು ಸಂಜೆ ಮನೆಗೆ ಬರುತ್ತೇವೆ. ಸಂಜೆಯಾದರೆ ಶಿಕ್ಷಕರೂ ಇರುವುದಿಲ್ಲ, ಶಿಕ್ಷಣ ಇಲಾಖೆಯ ಕಚೇರಿಗಳೂ ಮುಚ್ಚಿರುತ್ತವೆ.
ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎನ್ನುವುದು ತಿಳಿಯದಾಗಿದ್ದು, ಕೇವಲ ಚುನಾವಣೆಗಳು ಬಂದಾಗ ಜನಪ್ರತಿನಿಧಿಗಳು ಓಟು ಕೇಳಲು ಬರುತ್ತಾರೆ. ಇತ್ತ ಅಧಿಕಾರಿಗಳು ಪ್ರತಿಯೊಬ್ಬರೂ ಮತ ಚಲಾಯಿಸಲೇಬೇಕೆಂದು ಹೇಳಲು ಮಾತ್ರ ಬರುತ್ತಾರೆ. ಆದರೆ ಈ ಕಾಲೋನಿಯಲ್ಲಿರುವ ಶಾಲೆ ಶಿಥಿಲಾವಸ್ಥೆಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೋಡಿಯೂ ನೋಡದವರಂತೆ ವರ್ತಿಸುತ್ತಿದ್ದಾರೆಂದು ಕಾಲೋನಿಯ ನಿವಾಸಿಗಳು ಆರೋಪಿಸಿದ್ದಾರೆ.
-ಆರ್.ಬಸವಾ ರೆಡ್ಡಿ