ಚನ್ನಮ್ಮ ಕಿತ್ತೂರು: ಕುಮಾರಸ್ವಾಮಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿ ಇದರಲ್ಲಿ ಬಂದ ಹಣವನ್ನು ಮಂಡ್ಯದಲ್ಲಿ ಹಂಚಲು ತಯಾರಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಕಿತ್ತೂರು ಪಟ್ಟಣದಲ್ಲಿ ನಡೆದ ಕೆನರಾ ಲೋಕಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ನಾಯಕರ ಆಡಿಯೋದಲ್ಲಿ ಪ್ರತಿ ಬೂತಗೆ 5 ಲಕ್ಷದಂತ್ತೆ 150 ಕೋಟಿ ಹಂಚಲು ತಯಾರಿ ನಡೆಸಿದ್ದಾರೆ. ಇದಕ್ಕೆ ಮಂಡ್ಯದ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷೇತ್ರರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವು ನಿಶ್ಚಿತ ಎಂದು ಅವರು, ಜೆಡಿಎಸ್‌ನಲ್ಲಿ ಅಪ್ಪ-ಮಗ ರಾಜಕಾರಣ ಆದ ಮೇಲೆ ಈಗ ಮೊಮ್ಮಕ್ಕಳ ರಾಜಕಾರಣ ಶುರುವಾಗಿದೆ. ಇದಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಯಾರು ಭ್ರಷ್ಟಾಚಾರ ಮಾಡಿರುತ್ತಾರೆ ಅಂತವರ ಮೇಲೆ ಐಟಿ ದಾಳಿ ಸ್ವಾಭಾವಿಕ. ಆದರೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಗೌಪ್ಯತೆ ಕಾಪಾಡುತ್ತೇನೆಂದು ಶಪತ ಮಾಡಿ ಐಟಿ ಅಧಿಕಾರಿಗಳು ದಾಳಿ ಮಾಡುವುದನ್ನು ಬಹಿರಂಗ ಪಡಿಸಿ ಭ್ರಷ್ಟರು ಪಾರಾಗಲು ಸಹಾಯ ಮಾಡಿದ್ದಾರೆ. ಅಲ್ಲದೆ ಅವರ ಪರವಾಗಿ ಐಟಿ ಕಚೇರಿ ಮುಂದೆ ಪ್ರತಿಭಟನೆ ಮಾಡಿರುವುದು ದೇಶದ ಇತಿಹಾಸದಲ್ಲಿ ಪ್ರಥಮವಾಗಿದೆ ಎಂದರು.
ಸ್ವತ ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಮೋದಿಯುವರು ಇನ್ನೂ ಎರಡು ಅವಧಿಗೆ ಪ್ರಧಾನಿಯಾಗುತ್ತಾರೆ ಎಂದು ಹೇಳಿರುವುದು ಮೋದಿ ಜನಪ್ರಿಯತೆ ಎತ್ತಿ ತೋರಿಸುತ್ತದೆ. ಈ ರೀತಿ ವೈರಿ ಪಕ್ಷಗಳೂ ಕೂಡ ಮೆಚ್ಚಿಕೊಳ್ಳುವ ರೀತಿಯಲ್ಲಿ ನರೇಂದ್ರ ಮೋದಿ ಆಡಳಿತ ಮಾಡಿದ್ದಾರೆ. ಬಡವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಿದ್ದಾರೆ. 65 ವರ್ಷ ಮೀರಿದ ರೈತರಿಗೆ ಪಿಂಚಣಿ ಸೌಲಭ್ಯ ನೀಡಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಮೋದಿ ಮತ್ತೂಮ್ಮೆ ಆಯ್ಕೆಯಾದರೆ ದೇಶದಲ್ಲಿನ ಯಾವ ರಾಜ್ಯದಲ್ಲಿಯೂ ನೀರಿನ ಕೊರತೆ ಇಲ್ಲದಂತಾಗಲಿದೆ. ಆದ್ದರಿಂದ ಮತದಾರರು ದೇಶದ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು ಎಂದರು.
ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳು ಬಿಜೆಪಿಗೆ ದೊರಲಿದ್ದು, ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಡಾ| ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಜಗದೀಶ ವಸ್ತ್ರದ, ಲಿಂಗರಾಜ ಪಾಟೀಲ, ಸಿದ್ದಯ್ನಾ ಹಿರೇಮಠ, ಉಳವಪ್ಪ ಉಳ್ಳಾಗಡ್ಡಿ, ಡಿ.ಆರ್. ಪಾಟೀಲ ಇದ್ದರು.