ಬಳ್ಳಾರಿ: ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡ… ತರಗತಿಗೆ ತಕ್ಕ ಕೊಠಡಿಗಳ ಕೊರತೆಯಿಂದ ಪಕ್ಕದ ದೇವಸ್ಥಾನ ಆವರಣದಲ್ಲೇ ಮಕ್ಕಳಿಗೆ ಪಾಠ…. ಸೂಕ್ತ ಕಾಂಪೌಂಡ್ ಇಲ್ಲದೆ ರಸ್ತೆಯಲ್ಲೇ ನಲಿಕಲಿ, ಮಕ್ಕಳ ಆಟ… ಪಾಠ… ಒಂದು ಶಾಲೆಗೆ ಎರಡು ಅನುದಾನ ಬಳಕೆ….
ಹೌದು, ತಾಲೂಕಿನ ಕುಂಟನಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು. 1978ರಲ್ಲಿ ನಿರ್ಮಿಸಿದ್ದ ಈ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಟ್ಟಡದ ಮೇಲ್ಛಾವಣಿಯ ಕಾಂಕ್ರೀಟ್ ಕಳಚಿ ಬೀಳುತ್ತಿದೆ. 8ನೇ ತರಗತಿವರೆಗೆ ತರಗತಿಗಳು ನಡೆಯುವ ಈ ಶಾಲೆಯಲ್ಲಿ ಇರುವುದು ಕೇವಲ ಐದು ಕೊಠಡಿಗಳು.
ಅದರಲ್ಲಿ ಒಂದನ್ನು ಅಂಗನವಾಡಿ ಕೇಂದ್ರಕ್ಕೆ ನೀಡಲಾಗಿದೆ. ಮತ್ತೂಂದು ಕೊಠಡಿಯನ್ನು ಮುಖ್ಯ ಶಿಕ್ಷಕರು, ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉಳಿದ ಮೂರು ಕೊಠಡಿಗಳಲ್ಲಿ 8 ತರಗತಿಗಳನ್ನು ನಡೆಸಬೇಕಿದ್ದು, ಇದು ಸಾಲದ್ದರಿಂದ ಪಕ್ಕದಲ್ಲೇ ಇರುವ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ ಗಳಲ್ಲಿ ಪಾಠ ಪ್ರವಚನ ನಡೆಯುತ್ತಿದ್ದು, ಜೋರಾಗಿ ಮಳೆ ಬಂದರೆ ಸಾಕು, ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದು.
ಗ್ರಾಮದ ಮಧ್ಯದಲ್ಲಿರುವ ಶಾಲೆಯಲ್ಲಿ ನಲಿಕಲಿ (1 ರಿಂದ 3ನೇ ತರಗತಿ)ಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇನ್ನು 4 ರಿಂದ 8ನೇ ತರಗತಿವರೆಗೆ ಸುಮಾರು 250ಕ್ಕೂ ಹೆಚ್ಚು ಸೇರಿದಂತೆ ಅಂದಾಜು 470ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 4,7,8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಥಿಲಾವಸ್ಥೆ ತಲುಪಿರುವ ಕೊಠಡಿಗಳಲ್ಲೇ ತರಗತಿಗಳು ನಡೆದರೆ, ಇನ್ನು ನಲಿಕಲಿ ವಿದ್ಯಾರ್ಥಿಗಳಿಗೆ ರಸ್ತೆಯಲ್ಲೇ ಆಟ, ಪಾಠಗಳು ನಡೆಯುತ್ತವೆ. ದೇವಸ್ಥಾನದ ಸುತ್ತಲೂ ನಿರ್ಮಿಸಿರುವ ಶೆಡ್‌ಗಳೇ ಆಶ್ರಯವಾಗಿವೆ. ಮೇಲಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 9ನೇ ತರಗತಿ ಆರಂಭಿಸುವುದಕ್ಕೂ ಅನುಮತಿ ದೊರೆತಿದೆ ಎನ್ನಲಾಗುತ್ತಿದ್ದು, ಇನ್ನು ಇವರ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ.
ಕಾಂಪೌಂಡ್ ಕೊರತೆ: ಕುಂಟನಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1978ರಲ್ಲಿ ಕೇವಲ ಮೂರು ಕೊಠಡಿಗಳಿಂದ ಆರಂಭವಾಗಿದ್ದರೂ, ನಂತರದ ದಿನಗಳಲ್ಲಿ ಪಕ್ಕದಲ್ಲೇ ಹೆಚ್ಚುವರಿಯಾಗಿ ಮತ್ತೂಂದು ಕೊಠಡಿಯನ್ನು ನಿರ್ಮಿಸಲಾಗಿದೆ. ಆದರೆ, ಇಡೀ ಶಾಲೆಗೆ ಒಂದು ಕಾಂಪೌಂಡ್ ನಿರ್ಮಿಸಿಲ್ಲ. ಇದರಿಂದ 1 ರಿಂದ 3ನೇ ತರಗತಿ ವಿದ್ಯಾರ್ಥಿಗಳ ನಲಿಕಲಿ ಪಾಠಗಳೆಲ್ಲವೂ ರಸ್ತೆಯಲ್ಲೇ ನಡೆಯುತ್ತಿವೆ. ಅಲ್ಲದೇ, ಕಾಂಪೌಂಡ್ ಇಲ್ಲದ್ದರಿಂದ ನೆರೆಹೊರೆಯ ಗ್ರಾಮಸ್ಥರೆಲ್ಲರೂ ತಮ್ಮ ಟ್ರ್ಯಾಕ್ಟರ್, ದ್ವಿಚಕ್ರವಾಹನ ಇತರೆ ವಸ್ತುಗಳನ್ನು ಶಾಲಾ ಆವರಣದಲ್ಲೇ ನಿಲುಗಡೆ ಮಾಡುತ್ತಿದ್ದು, ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಿಟ್ಟಿದೆ.
ಒಂದೇ ಶಾಲೆಗೆ ಎರಡು ಅನುದಾನ: ಕುಂಟನಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಹೊರ ವಲಯದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ 2006-07ನೇ ಸಾಲಿನಲ್ಲಿ ಅಂದಿನ ಕುರುಗೋಡು ಶಾಸಕರಾಗಿದ್ದ ನಾರಾ ಸೂರ್ಯನಾರಾಯಣರೆಡ್ಡಿಯವರು ತಮ್ಮ ಅನುದಾನದಲ್ಲಿ 15 ಲಕ್ಷ ರೂ. ಬಿಡುಗಡೆಗೊಳಿಸಿದ್ದರು. ಈ ಅನುದಾನದಲ್ಲಿ ಈಗಾಗಲೇ 6 ಕೊಠಡಿಗಳುಳ್ಳ ಒಂದು ಶಾಲಾ ಕಟ್ಟಡವನ್ನು ನಿರ್ಮಿಸಲಾಗಿತ್ತು. ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದರಿಂದ ಹಲವು ವರ್ಷಗಳ ಕಾಲ ಬಳಸಲಾಗಿರಲಿಲ್ಲ. ಆದರೂ, ಕಳೆದ ಎರಡೂಮೂರು ವರ್ಷಗಳಿಂದ ಕಟ್ಟಡವನ್ನು ಬಳಸಲಾಗಿತ್ತಾದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಈ ಕಟ್ಟಡ ಸೂಕ್ತವಲ್ಲ ಎಂದು ವರದಿ ನೀಡಿದ್ದರಿಂದ ಕಟ್ಟಡವನ್ನು ಪುನಃ ಬಿಡಲಾಗಿದೆ.
ಇದೀಗ ಕಟ್ಟಡವನ್ನು ಪುನಃ ನೆಲಸಮಗೊಳಿಸಿದ್ದು, ಹೈಕ ಮಂಡಳಿಯಿಂದ 1.32 ಕೋಟಿ ರೂ.ಗೂ ಹೆಚ್ಚು ಅನುದಾನ ಬಂದಿದ್ದರಿಂದ ಪುನಃ 12 ಕೊಠಡಿಗಳುಳ್ಳ ಶಾಲೆ ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕೇವಲ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಂಬಂಧಪಟ್ಟ ಗುತ್ತಿಗೆದಾರರು ಸೂಚಿಸಿದ್ದಾರೆ ಎನ್ನಲಾಗುತ್ತಿದ್ದು, ಅದು ಸಾಧ್ಯವಾಗಲಿದೆಯೇ ಅಥವಾ ಮತ್ತೂಂದು ವರ್ಷ ವಿದ್ಯಾರ್ಥಿಗಳು ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲೇ ವ್ಯಾಸಂಗ ಮಾಡಲಿದ್ದಾರೆಯೇ ಕಾದು ನೋಡಬೇಕಾಗಿದೆ
ವೆಂಕೋಬಿ ಸಂಗನಕಲ್ಲು