Advertisement

ಶಿಥಿಲ ಕಟ್ಟಡದಲ್ಲಿ 5 ತರಗತಿಗಳ ಪಾಠ

01:08 PM Oct 06, 2018 | |

ದೇವದುರ್ಗ: ತಾಲೂಕಿನ ಹೂನೂರು ಸರ್ಕಾರಿ ಶಾಲೆಯಲ್ಲಿ ಎರಡು ಕೋಣೆಗಳ ನಿರ್ಮಾಣಕ್ಕೆ 13 ಲಕ್ಷ ಅನುದಾನ ಮಂಜೂರಾಗಿದ್ದರೂ, ಗ್ರಾಮಸ್ಥರು ಜಾಗೆ ನೀಡದ್ದಕ್ಕೆ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ.

Advertisement

ಎಚ್‌ಕೆಡಿಆರ್‌ಪಿ ಯೋಜನೆಯಡಿ ಹೂನೂರು ಸರ್ಕಾರಿ ಶಾಲೆಯ ಎರಡು ಕೋಣೆ ನಿರ್ಮಾಣಕ್ಕೆ 13 ಲಕ್ಷ ರೂ. ಮಂಜೂರಾಗಿದೆ. ಆದರೆ ಗ್ರಾಮಸ್ಥರು ಶಾಲೆಗೆ ಜಾಗೆ ನೀಡಲು ಮುಂದಾಗುತ್ತಿಲ್ಲ. ಇತ್ತ ಗ್ರಾಮ ಪಂಚಾಯತಿ ಕೂಡ ಸರ್ಕಾರಿ ಜಾಗೆ ಒದಗಿಸುವಲ್ಲಿ ವಿಫಲವಾಗಿದೆ. ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರು ಶಾಲೆಗೆ ಜಾಗೆ ಒದಗಿಸುವಂತೆ ಗ್ರಾಮಸ್ಥರ ಮನವೊಲಿಸಲು ಮಾಡಿದ ಪ್ರಯತ್ನಿಸಿದ್ದರೂ ಯಾರೊಬ್ಬರು ಶಾಲೆಗೆ ಜಾಗೆ ನೀಡುತ್ತಿಲ್ಲ. ಇನ್ನು ಇತ್ತ ಅಧಿಕಾರಿಗಳು ಕೂಡ ಜಾಗೆ ಒದಗಿಸಲು ಆಸಕ್ತಿ ತೋರುತ್ತಿಲ್ಲ. ಕಚೇರಿಗೆ ಅಲೆದು ಅಲೆದು ಸಾಕಾಗಿದೆ ಎನ್ನುತ್ತಾರೆ ಗುತ್ತಿಗೆದಾರರು. ಹೀಗಾಗಿ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಮಕ್ಕಳು ಶಿಥಿಲಗೊಂಡ ಹಳೆ ಕಟ್ಟಡದಲ್ಲೇ ಪಾಠ ಕೇಳುವಂತಾಗಿದೆ.

ಹೂನೂರು ಶಾಲೆ ಕಟ್ಟಡದ ಜೊತೆಗೆ ಗೋಪಳಾಪುರು ಶಾಲೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದ ಮಹೇಶ ಪಾಟೀಲ ಈಗಾಗಲೇ ಗೋಪಳಾಪುರ ಶಾಲೆ ಕಟ್ಟಡ ಪೂರ್ಣಗೊಳಿಸಿದ್ದು, ಅಲ್ಪಸ್ವಲ್ಪ ಕೆಲಸ ಬಾಕಿ ಇದೆ ಎಂದು ತಿಳಿದು ಬಂದಿದೆ. ಹೂನೂರು ಗ್ರಾಮಸ್ಥರು ಜಾಗೆ ನೀಡಿದ್ದರೆ ಇಷ್ಟೊತ್ತಿಗೆ ಕೆಲಸ ಪೂರ್ಣಗೊಂಡು ಕಟ್ಟಡ ಉದ್ಘಾಟನೆ ಆಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿತ್ತು.

ಹಳೆ ಕಟ್ಟಡದಲ್ಲಿ ಪಾಠ: ಹೂನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೆ ಕಟ್ಟಡ ಈಗಾಗಲೇ ಶಿಥಿಲಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 50ಕ್ಕೂ ಹೆಚ್ಚು ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಒಂದೇ ಕೊಠಡಿ ಇದೆ. ಜಾಗೆ ಸಮಸ್ಯೆಯಿಂದಾಗಿ ಒಬ್ಬ ಶಿಕ್ಷಕರು ಮಕ್ಕಳಿಗೆ ಹೊರಗಡೆ ಪಾಠ
ಮಾಡುತ್ತಾರೆ.

ಇನ್ನಾದರೂ ಕ್ಷೇತ್ರದ ಶಾಸಕರು, ಅಧಿಕಾರಿಗಳು ಇತ್ತ ಗಮನಹರಿಸಿ ಹೂನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಾಗೆ ಒದಗಿಸಲು ಮುಂದಾಗಬೇಕೆಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಜಾಲಹಳ್ಳಿ ಆಗ್ರಹಿಸಿದ್ದಾರೆ.

Advertisement

ಶಾಲಾ ಕಟ್ಟಡ ನಿರ್ಮಿಸಲು ಖಾಲಿ ನಿವೇಶನಕ್ಕಾಗಿ ನಾಲ್ಕು ತಿಂಗಳಿಂದ ಗ್ರಾಮಕ್ಕೆ, ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಅಲೆದು ಬೇಸತ್ತು ಹೋಗಿದ್ದೇನೆ. ತಿಂಗಳ ಒಳಗಾಗಿ ನಿವೇಶನ ಸೌಲಭ್ಯ ಕಲ್ಪಿಸದಿದ್ದಲಿ ಟೆಂಡರ್‌ ರದ್ದುಪಡಿಸಿಕೊಳ್ಳುವೆ.
 ಮಹೇಶ ಪಾಟೀಲ, ಗುತ್ತಿಗೆದಾರ.

ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಗ್ರಾಮಸ್ಥರು ಆಸಕ್ತಿ ವಹಿಸಿ ನಿವೇಶನ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಆದಷ್ಟೂ ಬೇಗ ಕಾಮಗಾರಿ ಆರಂಭಿಸಲು ಒತ್ತು ನೀಡುತ್ತೇನೆ.
 ಶಿವನಗೌಡ ನಾಯಕ, ಶಾಸಕರು

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next