Advertisement

ಸಿದ್ಧತೆಗೆ ಕಡಿಮೆ ಸಮಯಾವಕಾಶ: ಇಕ್ಕಟ್ಟಿನಲ್ಲಿ ಪಕ್ಷಗಳು

09:49 PM Oct 21, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಕಡಿಮೆ ಸಮಯಾವಕಾಶ ದೊರಕಿರುವುದು ರಾಜಕೀಯ ಪಕ್ಷಗಳನ್ನು ಇದೀಗ ಇಕ್ಕಟ್ಟಿಗೆ ಸಿಲುಕಿಸಿದ್ದು, ತತ್‌ಕ್ಷಣದಿಂದ ಕಾರ್ಯಪ್ರವೃತ್ತರಾಗುವ ಅನಿವಾರ್ಯ ಸೃಷ್ಟಿಸಿದೆ.

Advertisement

ಚುನಾವಣ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಕೆಗೆ ಅ. 31ರಂದು ಕೊನೆಯ ದಿನವಾಗಿದ್ದು, ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕೇವಲ 10 ದಿನಗಳ ಕಾಲಾವಕಾಶ ಮಾತ್ರ ಲಭಿಸುತ್ತದೆ. ಚುನಾವಣ ಅಧಿಸೂಚನೆ ಅ. 24ರಂದು ಹೊರಬೀಳಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಕಡಿಮೆ ಸಮಯ ಲಭಿಸಿರುವುದರಿಂದ ಅಭ್ಯರ್ಥಿಗಳ ಆಯ್ಕೆ, ಚುನಾವಣ ಕಾರ್ಯತಂತ್ರಗಳ ಬಗ್ಗೆ ರಾಜಕೀಯ ಪಕ್ಷಗಳು ಸಿದ್ಧತೆಯನ್ನು ಸೋಮವಾರದಿಂದಲೇ ಆರಂಭಿಸಿದೆ.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರತಿಯೊಂದು ವಾರ್ಡ್‌ ನಲ್ಲೂ ಪಕ್ಷದ ವತಿಯಿಂದ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಬುಧವಾರದೊಳಗೆ ಸಲ್ಲಿಸುವಂತೆ ಸೂಚಿಸಿದೆ. ಸೋಮವಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚುನಾವಣ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದೆ. ಈ ಮೂಲಕ ಕಳೆದ ಅವಧಿಯಲ್ಲಿ ಪಾಲಿಕೆಯಲ್ಲಿ ಹೊಂದಿದ್ದ ಆಡಳಿತ ಪಕ್ಷ ಸ್ಥಾನವನ್ನು ಈ ಬಾರಿಯೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ಗಳನ್ನು ರೂಪಿಸುವ ಕಾರ್ಯ ಆರಂಭಿಸಿದೆ.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ. ವಾರ್ಡ್‌ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ, ಹಿಂದಿನ ಅವಧಿಯಲ್ಲಿ ಪಕ್ಷದ ಕಾರ್ಪೊರೇಟರ್‌ಗಳಾಗಿದ್ದವರು ತೋರಿರುವ ನಿರ್ವಹಣೆ, ಪಾಲಿಕೆ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರ ಸಮಿತಿಗಳ ಅಧ್ಯಕ್ಷರಿಂದ ಮಾಹಿತಿ ಸಂಗ್ರಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು, ವಿಭಾಗ ಉಸ್ತುವಾರಿಯ ಸಭೆ ಶೀಘ್ರ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಾಲಿಕೆಯಲ್ಲಿ ಕಳೆದ ಅವಧಿಯಲ್ಲಿ ಬಿಜೆಪಿ 20 ಸ್ಥಾನಗಳೊಂದಿಗೆ ವಿಪಕ್ಷವಾಗಿತ್ತು.

ಜೆಡಿಎಸ್‌ ಈ ಬಾರಿ ಸುಮಾರು 38 ಸ್ಥಾನಗಳಿಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಈ ಬಗ್ಗೆ ಪಕ್ಷದ ವರಿಷ್ಠ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಮಂಗಳವಾರ ಪಕ್ಷದ ರಾಜ್ಯ ಉಪಾಧ್ಯಕ್ಷ , ಮಾಜಿ ಸಚಿವ ಅಮರನಾಥ ಶೆಟ್ಟಿ ಸಹಿತ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಯಲಿದೆ. ಮುಂದಿನ ವಾರ ದೇವೇಗೌಡ ಅವರು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಆ ವೇಳೆ ಸ್ಪರ್ಧಿಸುವ ಸ್ಥಾನಗಳು ಹಾಗೂ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಾಲಿಕೆ ಕಳೆದ ಅವಧಿಯಲ್ಲಿ ಜೆಡಿಎಸ್‌ ಎರಡು ಸ್ಥಾನಗಳನ್ನು ಹೊಂದಿತ್ತು.

Advertisement

ಎಸ್‌ಡಿಪಿಐ ಈ ಬಾರಿ ಸುಮಾರು 15 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಇದರಲ್ಲಿ ಕಣ್ಣೂರು, ಬಜಾಲ್‌, ಬೆಂಗ್ರೆ, ಕುದ್ರೋಳಿ, ಕೃಷ್ಣಾಪುರ, ಕುಂಜತ್ತಬೈಲ್‌ ವಾರ್ಡ್‌ಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯ ಪೂರ್ಣಗೊಳಿಸಿದೆ. ಅಭ್ಯರ್ಥಿಗಳ ಆಯ್ಕೆ, ಚುನಾವಣ ಸಿದ್ಧತೆ ಬಗ್ಗೆ ಸೋಮವಾರ ಪಕ್ಷದ ವರಿಷ್ಠರು ಸಭೆ ನಡೆಸಿದ್ದಾರೆ. ಪಾಲಿಕೆಯಲ್ಲಿ ಕಳೆದ ಅವಧಿಯಲ್ಲಿ ಎಸ್‌ಡಿಪಿಐ ಒಂದು ಸ್ಥಾನವನ್ನು ಹೊಂದಿತ್ತು.
ಸಿಪಿಎಂ ಪಾಲಿಕೆಯಲ್ಲಿ ಸ್ಪರ್ಧೆಗೆ ಸಿದ್ಧತೆಗಳನ್ನು ಆರಂಭಿಸಿದೆ. ಸ್ಪರ್ಧೆ ಮಾಡುವ ಸ್ಥಾನಗಳು, ವಾರ್ಡ್‌ಗಳ ಬಗ್ಗೆ ಶೀಘ್ರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಅವಧಿಯಲ್ಲಿ ಸಿಪಿಎಂ ಒಂದು ಸ್ಥಾನವನ್ನು ಹೊಂದಿತ್ತು.

ಶೇ.50 ಸ್ಥಾನ ಮಹಿಳೆಯರಿಗೆ ಮೀಸಲು
ಪಾಲಿಕೆಯಲ್ಲಿ ಈ ಬಾರಿ ಶೇ.50 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಇದರಂತೆ 60 ಸ್ಥಾನಗಳನ್ನು ಹೊಂದಿರುವ ಪಾಲಿಕೆಯಲ್ಲಿ ಚುನಾವಣ ಸಿದ್ಧತೆ ಬಗ್ಗೆ ಬಾರಿ 29 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪಾಲಿಕೆಯ ಕಳೆದ ಅವಧಿಯಲ್ಲಿ ಒಟ್ಟು 22 ಮಹಿಳಾ ಸದಸ್ಯರಿದ್ದರು. 2013ರ ಚುನಾವಣೆ ಸಂದರ್ಭ ಶೇ.50 ಮಹಿಳಾ ಮೀಸಲಾತಿ ಜಾರಿಯಾಗಿದ್ದರೂ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಇದು ಅನುಷ್ಠಾನವಾಗದೆ ಹಿಂದೆ ಇದ್ದ ಶೇ.33 ಮೀಸಲಾತಿಯಲ್ಲಿ ಚುನಾವಣೆ ನಡೆದಿತ್ತು.

ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿ ಆಹ್ವಾನ
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಬುಧವಾರದೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಪಕ್ಷದ ಜಿಲ್ಲಾ ನಾಯಕರು, ರಾಜ್ಯ ವರಿಷ್ಠ ನಾಯ ಕರು ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಪೂರ್ವಭಾವಿ ಸಭೆಯೊಂದು ಸೋಮವಾರ ನಡೆದಿದೆ.
 - ಕೆ. ಹರೀಶ್‌ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

ಅಭಿಪ್ರಾಯ ಸಂಗ್ರಹ
ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಜೆಪಿ ಸಭೆ ಸದ್ಯದಲ್ಲೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಪ್ರತಿಯೊಂದು ವಾರ್ಡ್‌ನ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ, ಹಿಂದಿನ ಅವಧಿಯಲ್ಲಿನ ಸದಸ್ಯರು ತೋರಿರುವ ನಿರ್ವಹಣೆಯ ಪರಿಶೀಲನೆ ನಡೆಯಲಿದೆ.
 - ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷರು

38 ಸ್ಥಾನಗಳಿಗೆ ಸ್ಪರ್ಧೆ
ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸುಮಾರು 38 ಸ್ಥಾನಗಳಿಗೆ ಸ್ಪರ್ಧಿಸಲು ಇಚ್ಛಿಸಲಾಗಿದೆ. ಪಕ್ಷದ ವರಿಷ್ಠ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೊಂದಿಗೆ ಜಿಲ್ಲೆಯ ನಾಯಕರು ಚರ್ಚೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.
 - ವಸಂತ ಪೂಜಾರಿ, ಜೆಡಿಎಸ್‌ ಮಂಗಳೂರು ವಿಧಾನ ಸಮಿತಿ ಅಧ್ಯಕ್ಷರು

ಶೀಘ್ರ ಸಭೆ ಸೇರಿ ನಿರ್ಧಾರ
ಪಾಲಿಕೆ ಚುನಾವಣೆಯಲ್ಲಿ ಈಬಾರಿ ಎಷ್ಟು ಸ್ಥಾನಗಳಿಗೆ ಸ್ಪರ್ಧೆ ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಿಪಿಎಂ ಜಿಲ್ಲಾ ಸಮಿತಿ ಶೀಘ್ರ ಸಭೆ ಸೇರಿ ನಿರ್ಧರಿಸಲಿದೆ.
 - ವಸಂತ ಆಚಾರಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ

ಸಿದ್ಧತೆ ಆರಂಭಿಸಲಾಗಿದೆ
ಪಾಲಿಕೆ ಚುನಾವಣೆಗೆ ಎಸ್‌ಡಿಪಿಐ ಈಗಾಗಲೇ ಸಿದ್ಧತೆ ಆರಂಭಿಸಿದೆ. 15 ಸ್ಥಾನಗಳಿಗೆ ಸ್ಪರ್ಧಿಸಲು ಪ್ರಸ್ತುತ ನಿರ್ಧಾರ ಕೈಗೊಳ್ಳಲಾಗಿದ್ದು ಇದರಲ್ಲಿ 6 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆಗಿದೆ.
 - ಅಥಾವುಲ್ಲಾ ಜೋಕಟ್ಟೆ,, ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next