ಹೊಸದಿಲ್ಲಿ: ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ಖಾಸಗಿ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ. ಎಲ್‌ನಿನೋದಿಂದಾಗಿ ಈ ಬಾರಿ ಶೇ. 93ರಷ್ಟು ಮಳೆಯಾಗಲಿದ್ದು, ಇದು ವಾಡಿಕೆಗಿಂತ ಕಡಿಮೆ ಪ್ರಮಾಣದ್ದಾಗಿರಲಿದೆ ಎಂದಿದೆ. ಈ ವರದಿ ನಿಜವಾದಲ್ಲಿ ಸತತ ಎರಡನೇ ವರ್ಷವೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾದಂತಾಗಲಿದೆ. ಸ್ಕೈಮೆಟ್ ವರದಿ ಪ್ರಕಾರ ಪೂರ್ವ ಭಾರತದ ಒಡಿಶಾ, ಛತ್ತೀಸ್‌ಗಢ ಮತ್ತು ಆಂಧ್ರ ಕರಾವಳಿ ಪ್ರದೇಶದಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ದೇಶದ ಪೂರ್ವ ಮತ್ತು ಕೇಂದ್ರೀಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ಜೂನ್ ಮತ್ತು ಜುಲೈನಲ್ಲಿ ಶೇ. 91ರಷ್ಟು ಮತ್ತು ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಶೇ. 102ರಿಂದ 99ರಷ್ಟು ಮಳೆ ಮುನ್ಸೂಚನೆಯಿದೆ. ಸರಕಾರದ ಅಧಿಕೃತ ಹವಾಮಾನ ಇಲಾಖೆ ಐಎಂಡಿ ಕಳೆದ ವಾರವಷ್ಟೇ ಈ ಬಾರಿಯ ಮಾನ್ಸೂನ್ ಉತ್ತಮವಾಗಿರಲಿದೆ. ಯಾವುದೇ ಎಲ್ ನಿನೋ ಮುನ್ಸೂಚನೆ ಇಲ್ಲ ಎಂದಿತ್ತು.