ಬೆಂಗಳೂರು: ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ನಿಯಂತ್ರಣದ ಜೊತೆಗೆ ಸಮೂಹ ಸಾರಿಗೆಗೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ತಿಂಗಳ 2ನೇ ಭಾನುವಾರದಂದು ರಾಜಧಾನಿ ಬೆಂಗಳೂರಿನಲ್ಲಿ “ವಿರಳ ಸಂಚಾರ ದಿನ’ (ಲೆಸ್ ಟ್ರಾಫಿಕ್ ಡೇ) ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.
ವಿಕಾಸಸೌಧದದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು, 2018ರ ಫೆಬ್ರವರಿ ತಿಂಗಳಿಂದ ವಿರಳ ಸಂಚಾರ ದಿನ ಅಭಿಯಾನ ಆರಂಭವಾಗಲಿದ್ದು, ಆ ತಿಂಗಳ 2ನೇ ಭಾನುವಾರ ಮೊದಲ ವಿರಳ ಸಂಚಾರ ದಿನ ಅಭಿಯಾನ ನಡೆಯಲಿದೆ. ಈ ಸಂಬಂಧ ಸದ್ಯದಲ್ಲಿಯೇ ವಿವಿಧ ನಾಗರಿಕ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ನಗರ ಪೊಲೀಸ್ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಬಿಬಿಎಂಪಿ ಆಯುಕ್ತರ ಸಭೆ ಕರೆಯಲಾಗುವುದು ಎಂದರು.
ಬೆಂಗಳೂರು ದೆಹಲಿಯಂತೆ ವಿಷಮಯ ವಾತಾವರಣ ಹೊಂದುವುದು ಬೇಡ. ಒಂದೆಡೆ ಸಂಚಾರ ದಟ್ಟಣೆ ಮತ್ತೂಂದೆಡೆ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ಹೊರಬರಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಒಂದು ದಿನ ಬೆಂಗಳೂರಿಗರು ತಮ್ಮ ಪರಿಸರ ಉಳಿವಿಗಾಗಿ ಸ್ವಂತ ವಾಹನಗಳ ಬಳಕೆಗೆ ಸ್ಥಗಿತಗೊಳಿಸುವ ದಿಟ್ಟ ನಿರ್ಧಾರ ಕೈಗೊಳಬೇಕಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳ 2ನೇ ಭಾನುವಾರ ವಿರಳ ಸಂಚಾರ ದಿನ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ನಿಷೇಧವಿಲ್ಲ, ಕೇವಲ ಜಾಗೃತಿ: ವಿರಳ ಸಂಚಾರ ದಿನದಂದು ಸ್ವಂತ ವಾಹನಗಳ ಬಳಕೆಗೆ ನಿರ್ಬಂಧ ಅಥವಾ ನಿಷೇಧ ಹೇರಲ್ಲ. ಆದರೆ, ಬದಲಿಗೆ ಸಾರಿಗೆ ಸಂಸ್ಥೆಯ ಬಸ್‌ಗಳು, ಬಾಡಿಗೆ ವಾಹನಗಳು (ಹಳದಿ ಫಲಕ ವಾಹನಗಳು), ಆಟೋರಿಕ್ಷಾಗಳು, ಎಲೆಕ್ಟ್ರಿಕ್ ವಾಹನಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಬಸ್ ದಿನಾಚರಣೆ ರೀತಿ ಅಲ್ಲ: ಈಗ ಹಾಲಿ ಆಚರಣೆಯಲ್ಲಿರುವ ಬಸ್ ದಿನಕ್ಕೂ ವಿರಳ ಸಂಚಾರ ದಿನಕ್ಕೂ ವ್ಯತ್ಯಾಸವಿದೆ. ಬಸ್ ದಿನಾಚರಣೆಯಲ್ಲಿ ಬಸ್‌ನಲ್ಲಿ ಸಂಚರಿಸಲು ಮಾತ್ರ ಮನವಿ ಮಾಡಲಾಗುತ್ತದೆ. ಆದರೆ, ವಿರಳ ಸಂಚಾರ ದಿನ ಅಭಿಯಾನದಲ್ಲಿ ಸ್ವಯಂಪ್ರೇರಿತವಾಗಿ ಸ್ವಂತ ವಾಹನಗಳ ಬಳಕೆ ನಿಲ್ಲಿಸುವಂತೆ ಮನವಿ ಮಾಡಲಾಗುವುದು. ಸಹಜವಾಗಿ ಎರಡನೇ ಶನಿವಾರ ಮತ್ತು ಭಾನುವಾರ ರಜಾ ದಿನ ಇದ್ದು, ಅಷ್ಟೇನು ವ್ಯಾಪಾರ ವಹಿವಾಟು ಇರುವುದಿಲ್ಲ. ಈ ಒಂದು ದಿನ ವಾಹನ ಸಂಚಾರ ನಿಲ್ಲಿಸಿದರೆ ಬೆಂಗಳೂರಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.