Advertisement

Leprosy ಕರಾವಳಿಯಲ್ಲಿ ಏರಿಕೆಯಲ್ಲಿದೆ ಕುಷ್ಠ ರೋಗ

11:23 PM Aug 18, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಕುಷ್ಠ ರೋಗ ಪ್ರಕರಣ ಏರುಗತಿಯಲ್ಲಿರುವುದು ಕಳವಳಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಬಿಳಿ ಮಚ್ಚೆ ಸರ್ವೇ ನಡೆಸುವ ಮೂಲಕ ಪೂರ್ವದಲ್ಲೇ ಸಂಭಾವ್ಯ ಕುಷ್ಠರೋಗಿಗಳನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.

Advertisement

ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಕುಷ್ಠ ರೋಗ ಮತ್ತು ದೇಹದಲ್ಲಿ ಬಿಳಿ ಮಚ್ಚೆ ಸಹಿತ ರೋಗ ಲಕ್ಷಣದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಒಂದು ವೇಳೆ ರೋಗ ಲಕ್ಷಣವಿದ್ದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಲಾಗುತ್ತಿದೆ. ಈ ಪ್ರಕ್ರಿಯೆಗೆ ಕಳೆದ ಕೆಲವು ದಿನಗಳಿಂದ ಮತ್ತಷ್ಟು ವೇಗ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019-20ರಲ್ಲಿ ದಾಖಲಾಗಿದ್ದ 37 ಪ್ರಕರಣ 2022-23ಕ್ಕೆ 75ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಪ್ರತೀ ವರ್ಷ ಏರಿಳಿತವಾಗುತ್ತಿದೆ. 2023ರ ಎಪ್ರಿಲ್‌ನಿಂದ ಈವರೆಗೆ ದ.ಕ. ಜಿಲ್ಲೆಯಲ್ಲಿ 10 ಮತ್ತು ಉಡುಪಿ ಜಿಲ್ಲೆಯಲ್ಲಿ 16 ಪ್ರಕರಣ ದಾಖಲಾಗಿದೆ.

ರೋಗ ಹೆಚ್ಚಳಕ್ಕೆ ಕಾರಣವೇನು?
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ರೋಗ ಪತ್ತೆ ಹೆಚ್ಚಾಗಲು ಹಲವು ಕಾರಣವಿದೆ. ಉದ್ಯೋಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ಜಿಲ್ಲೆ/ರಾಜ್ಯಗಳಿಂದ ಕಾರ್ಮಿಕರು ಬರುತ್ತಿದ್ದು, ವಲಸೆ ಕಾರ್ಮಿಕರಲ್ಲೂ ಕುಷ್ಠ ರೋಗ ದಾಖಲಾಗುತ್ತಿದೆ. ಆ ರೀತಿ 25 ಪ್ರಕರಣಗಳು ಕಳೆದ ವರ್ಷ ದಾಖಲಾಗಿದೆ. ಆದೇ ರೀತಿ ಇತ್ತೀಚೆಗೆ ಅಭಿಯಾನ, ಕ್ಯಾಂಪ್‌ ಹೆಚ್ಚಾಗುತ್ತಿದೆ. ಇದು ಕೂಡ ಹೆಚ್ಚು ಪ್ರಕರಣಕ್ಕೆ ಕಾರಣವಾಗುತ್ತಿದೆ. ಕಳೆದ ತಿಂಗಳು ದ.ಕ. ಜಿಲ್ಲೆಯಾದ್ಯಂತ ಕುಷ್ಠ ರೋಗ ಪತ್ತೆ ಅಭಿಯಾನ ನಡೆಸಲಾಗಿದ್ದು, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣ ಪತ್ತೆ ಹಚ್ಚಲಾಗಿದೆ. ಇದೀಗ ಆ ಭಾಗದಲ್ಲಿ ಮತ್ತಷ್ಟು ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಉಡುಪಿ ಜಿಲ್ಲೆಯಲ್ಲಿ “ಸ್ಕಿನ್‌ ಕ್ಯಾಂಪ್‌’
ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಕುಷ್ಠ ರೋಗ ಪ್ರಕರಣಗಳು ಕಡಿಮೆ ಸಿಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಕಿನ್‌ ಕ್ಯಾಂಪ್‌ ನಡೆಸಲಾಗುತ್ತಿದೆ. ಎನ್‌ಜಿಒಗಳು ಸಾಥ್‌ ನೀಡುತ್ತಿದ್ದು, ಜಿಲ್ಲಾಸ್ಪತ್ರೆಯ ಮೂರು ಮಂದಿ ವೈದ್ಯರು ಮತ್ತು ಕೆಎಂಸಿ ಆಸ್ಪತ್ರೆಯ ವೈದ್ಯರೂ ಸಹಕಾರ ನೀಡುತ್ತಿದ್ದಾರೆ. ಚರ್ಮದ ತೊಂದರೆ ಇರುವ ರೋಗಿಗಳು ಕ್ಯಾಂಪ್‌ಗೆ ಬರುವಂತೆ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ವೇಳೆ ಬರುವವರಲ್ಲಿಯೂ ಕುಷ್ಠ ರೋಗ ಲಕ್ಷಣ ಪತ್ತೆಯಾಗುತ್ತಿದೆ ಎನ್ನುತ್ತಾರೆ ಆಧಿಕಾರಿಗಳು.

Advertisement

ವರ್ಷಾಂತ್ಯಕ್ಕೆ “ಸ್ಪರ್ಶ್‌’ ಅಭಿಯಾನ
ಕುಷ್ಠ ರೋಗ ನಿಯಂತ್ರಣಕ್ಕೂ ಹೆಚ್ಚು ನಿರ್ಮೂಲನೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಈ ವರ್ಷಾಂತ್ಯಕ್ಕೆ ಹದಿನೈದು ದಿನಗಳ ಕಾಲ ಸ್ಪರ್ಶ್‌ ಅಭಿಯಾನ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಅಭಿಯಾನದ ಮೂಲಕ ಕುಷ್ಠ ರೋಗ ಜಾಗೃತಿ ಕಾರ್ಯ ಕೈಗೊಳ್ಳಲಿದೆ. ಜಿಲ್ಲೆಯ ವಿವಿಧ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ಕುಷ್ಠ ರೋಗಕ್ಕೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತದೆ. ರೋಗ ಪತ್ತೆ ಹಚ್ಚುವುದು, ಬಳಿಕ ಯಾವ ರೀತಿ ಚಿಕಿತ್ಸೆ, ಔಷಧ ಪ್ರಕ್ರಿಯೆ, ಯಾರನ್ನು ಸಂಪರ್ಕಿಸಬೇಕು ಸಹಿತ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇನ್ನು, ಮನೆ-ಮನೆಗೆ ತೆರಳಿಯೂ ಅಭಿಯಾನ ನಡೆಸಲು ನಿರ್ಧಾರ ಮಾಡಲಾಗಿದೆ.

ಕುಷ್ಠ ರೋಗದ ಲಕ್ಷಣಗಳಿವು
ಕುಷ್ಠ ರೋಗವು ಆರಂಭಿಕ ಹಂತದಲ್ಲಿ ಚರ್ಮಕ್ಕೆ ಹಾನಿ ಉಂಟುಮಾಡುತ್ತದೆ. ಕುಷ್ಠರೋಗವು ವೈರಸ್‌ನಿಂದ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಕೆಮ್ಮು ಮತ್ತು ಸೀನಿನ ಮೂಲಕ ಮತ್ತೂಬ್ಬರನ್ನು ಪ್ರವೇಶಿಸುತ್ತದೆ. ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಕಾಣಿಸುತ್ತದೆ. ತ್ವಚೆಯ ಮೇಲೆ ಕೆಂಪಾದ ಬಾವು, ನೋವಿನಿಂದ ಕೂಡಿದ ಹಗ್ಗದ ಹಾಗೆ ಊದಿಕೊಂಡ ನರಗಳು, ಪಾದಗಳ, ಬೆರಳುಗಳ ದೌರ್ಬಲ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ ಕಾಣಿಸುತ್ತದೆ. ಇವುಗಳಲ್ಲಿ ಯಾವುದೇ ಲಕ್ಷಣ ಕಂಡುಬಂದರೆ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬಹುದಾಗಿದ್ದು, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿದೆ.

ಪರಿಣಾಮಕಾರಿ ಚಿಕಿತ್ಸೆ
ಕುಷ್ಠ ರೋಗ ತಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. ತ್ವರಿತ ರೋಗ ಪತ್ತೆಯ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆ ಭೇಟಿ ವೇಳೆ ಬಿಳಿ ಮಚ್ಚೆ ಸರ್ವೇ ಮಾಡಲಾಗುತ್ತಿದೆ. ಅದೇ ರೀತಿ, ವಿವಿಧ ಭಾಗಗಳಲ್ಲಿ ಕ್ಯಾಂಪ್‌ ನಡೆಸಿ, ರೋಗ ಪತ್ತೆ ಹಚ್ಚಲಾಗುತ್ತಿದೆ. ದೇಹದಲ್ಲಿ ಬಳಿ ಮಚ್ಚೆ ಸಹಿತ ಕುಷ್ಠ ರೋಗ ಕಂಡುಬಂದರೆ ಹತ್ತಿರದ ಆಸ್ಪತ್ರೆ, ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ.
– ಡಾ| ಸುದರ್ಶನ್‌, ಡಾ| ಲತಾ ನಾಯಕ್‌,
ಕುಷ್ಠ ರೋಗ ನಿಯಂತ್ರಣಾಧಿಕಾರಿಗಳು, ದ.ಕ., ಉಡುಪಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next