ಕಾರವಾರ: ಬಾಡ ಬಿ.ಇಡಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಡಿಎಚ್‌ಒ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ 2020ರ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಹಾಗೂ ವಿಚಾರ ಸಂಕಿರಣ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಡಿಎಚ್‌ಒ ಡಾ| ಅಶೋಕಕುಮಾರ್ ಪ್ರತಿಜ್ಞಾವಿಧಿ ಬೋಧಿಸಿ, ಈ ಸ್ಪರ್ಶ ಕುಷ್ಠ ರೋಗದ ಕಾರ್ಯಕ್ರಮವು ಸಾಂಕೇತಿಕ ವಾಗಿದ್ದು, ಜಿಲ್ಲೆಯಲ್ಲಿ ಜ.30 ರಿಂದ ಫೆ.13 ರವರೆಗೆ ನಡೆಯಲಿದೆ ಎಂದರು.
ಅಲ್ಲದೇ, ಈ ರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರ ಎಂಬ ರೋಗಾಣುವಿನಿಂದ ಬರುತ್ತಿದ್ದು, ದೇಶದಲ್ಲಿ ಇದುವರೆಗೂ ಶೇ.50 ರಷ್ಟು ಕುಷ್ಠರೋಗವನ್ನು ಪತ್ತೆ ಮಾಡಲಾಗಿದೆ. ಸಮಾಜದಲ್ಲಿ ಈ ರೋಗವು ಪ್ರಾರಂಭಿಕ ಹಂತದಲ್ಲಿರುವಾಗಲೇ ಅದನ್ನು ಹತೋಟಿಗೆ ತರುವಲ್ಲಿ ವಿದ್ಯಾರ್ಥಿ ಯುವ ಪೀಳಿಗೆ, ಆಶಾಕಾರ್ಯಕರ್ತೆಯರು, ಮೇಲ್ವಿಚಾರಕರುಮಹತ್ವದ ಪಾತ್ರ ವಹಿಸಬೇಕಿದೆ ಎಂದರು. ಅತಿಥಿಗಳಾಗಿದ್ದ ಆರೋಗ್ಯ ಇಲಾಖೆ ಅಧಿಕಾರಿ
ಎಸ್.ಜಿ. ನಾಯಕ್ ಮಾತನಾಡಿ, 1980ರಲ್ಲಿ ಎಂಡಿಟಿ ಕಾರ್ಯಕ್ರಮ ಜಾರಿಗೆ ಬಂದ ಬಳಿಕ ಸ್ವಲ್ಪ ಮಟ್ಟಿಗೆ ಕುಷ್ಠರೋಗವು ಹತೋಟಿಗೆ ಬಂದಿದ್ದು, ಇದುವರೆಗೂ ಸಮಾಜದಲ್ಲಿ ಸೌಮ್ಯ ರೂಪದ ಕುಷ್ಠರೋಗದ ರೋಗಿಗಳನ್ನು ಕಾಣುತ್ತಿದ್ದು, ಹೀಗಾಗಿ ಆರೋಗ್ಯ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ ಎಂಡಿಟಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ರೋಗಿಗಳಿಗೆ ಈ ಬಗ್ಗೆ ಅರಿವು ಮೂಡಿಸಿದರೆ 100ಕ್ಕೆ ನೂರರಷ್ಟು ಕಾಯಿಲೆ ಹತೋಟಿಗೆ ತರಬಹುದೆಂದರು.
ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಶಿವಾನಂದ ನಾಯಕ್ ಮಾತನಾಡಿ, ರಾಷ್ಟ್ರಪಿತ ಗಾಂಧೀಜಿ ಇಹಲೋಕ ತ್ಯಜಿಸಿದ ದಿನವನ್ನೇ ಇಂದು ನಾವೆಲ್ಲ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಾನವೀಯತೆ ಮೂಲಕವೇ ಮನುಕುಲ ನಿರ್ಮಾಣವಾಗಬೇಕು ಎಂದರು.
ಆರೋಗ್ಯ ಇಲಾಖೆ ಅಧಿಕಾರಿ ಎಸ್.ಜಿ. ನಾಯಕ್, ಜಿಲ್ಲಾ ಆರೋಗ್ಯ ಸರ್ವೇಕ್ಷಾಣಾಧಿಕಾರಿ ಸೂರಜ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆ ಅಧಿಕಾರಿ ಎಸ್.ಜಿ. ನಾಯಕ್ ನಿರೂಪಿಸಿ,ದರು.