ತುಮಕೂರು: ಜಿಲ್ಲೆಯಲ್ಲಿ ಸೆ. 5ರಿಂದ 23ರವರೆಗೆ ಪ್ರತಿ ಮನೆಗಳಿಗೆ ಭೇಟಿ ನೀಡಿ ಕುಷ್ಠರೋಗ ಪತ್ತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಆರ್ ಮೋಹನ್ ತಿಳಿಸಿದರು. ತಾಲೂಕು ಆರೋಗ್ಯಾಧಿ ಕಾರಿ ಕಚೇರಿ ಸಭಾಂಗ ಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯ್ದ 9 ಜಿಲ್ಲೆಗಳಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಹಮ್ಮಿಕೊಂಡಿದ್ದು, ಇದರಲ್ಲಿ ತುಮಕೂರು ಕೂಡ ಒಂದಾಗಿದೆ ಎಂದರು.
ಜಿಲ್ಲೆಯಲ್ಲಿ ಕುಷ್ಠರೋಗ ಕುರಿತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡ ಬೇಕು. ಕುಟುಂಬದ ಪ್ರತಿಯೊಬ್ಬರ ದೈಹಿಕ ಪರೀಕ್ಷೆ ನಡೆಸಬೇಕು. ಕುಷ್ಠರೋಗ ಪ್ರಕರಣಗಳು ಕಂಡು ಬಂದಲ್ಲಿ ರೋಗಿಗಳ ಮನವೊಲಿಸಿ ಹತ್ತಿರದ ಪ್ರಾಥಮಿಕ ಅಥವಾ ತಾಲೂಕು ಆರೋಗ್ಯ ಕೇಂದ್ರ ಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವಂತೆ ತಿಳಿಸಬೇಕು ಎಂದು ಹೇಳಿದರು.
ನಿಗಾವಹಿಸದಿದ್ದಲ್ಲಿ ಅಂಗವಿಕಲತೆ: ಮೊದಲು ಚರ್ಮ ಹಾಗೂ ನರಗಳಲ್ಲಿ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಕುಷ್ಠರೋಗ ಸಾಮಾನ್ಯವಾಗಿ ಮಾಸಲು ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಕತ್ತಿನ ಪಕ್ಕ, ಮೊಣಕೈ ಹಾಗೂ ಮೊಣ ಕಾಲಿನ ಹಿಂಭಾಗ ನರಗಳ ಊತ ಹಾಗೂ ನೋವು ಕಂಡುಬರುತ್ತದೆ. ಕುಷ್ಠರೋಗದ ಲಕ್ಷಣ ಕಂಡುಬಂದ ತಕ್ಷಣ ರೋಗಿ ಶೀಘ್ರ ಚಿಕಿತ್ಸೆ ಪಡೆಯದೇ ನಿಗಾ ವಹಿಸದಿದ್ದಲ್ಲಿ ಅಂಗವಿಕಲತೆ ಉಂಟಾಗುತ್ತದೆ ಎಂದು ಎಚ್ಚರಿಸಿದರು.
463 ತಂಡ ರಚನೆ: ರೋಗದ ಸಮೀಕ್ಷೆ ನಡೆಸಲು ಜಿಲ್ಲೆಯಲ್ಲಿ ಒಟ್ಟು 463 ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲೂ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ, 92 ಸೂಪರ್ ವೈಸರ್‌ಗಳು, 274 ಆಶಾ ಕಾರ್ಯ ಕರ್ತೆಯರಿದ್ದಾರೆ. ಸರ್ಕಾರಿ ರಜೆ ದಿನ ಹೊರತು ಪಡಿಸಿ ಪ್ರತಿದಿನ ನಗರದಲ್ಲಿ 25 ಮನೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 20 ಮನೆಗಳಿಗೆ ಬೇಟಿ ನೀಡಿ ಕುಟುಂಬ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸ ಲಾಗುತ್ತದೆ. ವಸತಿ ಶಾಲೆಗಳು ಹಾಗೂ ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ತಪಾ ಸಣೆಗೆ ಒಳಪಡಿಸಬೇಕು. ಆಯಾ ಸ್ಥಳಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ತಪಾಸಣೆಗೆ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು. ರೋಗ ನಿರ್ಮೂಲನೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ, ನಗರದ ಸಿಡಿಪಿಒ ಸತ್ಯ ನಾರಾಯಣ, ಗ್ರಾಮಾಂತರ ಎ.ಸಿ.ಡಿ.ಪಿ.ಒ ಮಾಲಾ ಇತರರಿದ್ದರು.