Advertisement

ಚಿರತೆ ಓಡಾಟ: ಬೆಚ್ಚಿಬಿದ್ದ ಗ್ರಾಮಸ್ಥರು

07:20 AM Feb 10, 2019 | Team Udayavani |

ಗುಂಡ್ಲುಪೇಟೆ: ಪಟ್ಟಣದ ಜೆಎಸ್‌ಎಸ್‌ ಕಾಲೇಜು ಎದುರಿನ ಅಶ್ವಿ‌ನಿ ಬಡಾವಣೆ ಹಾಗೂ ಮಡಹಳ್ಳಿ ರಸ್ತೆ ಹಾಗೂ ಮಹದೇವಪ್ರಸಾದ್‌ ಬಡಾವಣೆಯ ಸುತ್ತಮುತ್ತ ಚಿರತೆಯ ಓಡಾಟ ಹೆಚ್ಚಾಗಿದ್ದು, ಬೇಲಿಯ ಪೊದೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬಡಾವಣೆಯ ನಿವಾಸಿಗಳು ಭಯಭೀತರಾಗಿದ್ದು, ಕೂಡಲೇ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Advertisement

ಮಡಹಳ್ಳಿ ರಸ್ತೆಯಲ್ಲಿ ಹಾದು ಹೋಗಿರುವ ಹಳ್ಳದಲ್ಲಿ ಗಿಡಗಂಟಿಗಳು ಬೆಳೆದು ಭಾರೀ ಗಾತ್ರದ ಪೊದೆಗಳಾಗಿವೆ. ಇದರ ಇಕ್ಕೆಲಗಳಲ್ಲಿಯೂ ಇತ್ತೀಚೆಗೆ ಬಡಾವಣೆಗಳಲ್ಲಿ ಅಲ್ಲಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಚಿರತೆಯು ದಾಳಿ ಮಾಡುವ ಭೀತಿಯಿಂದ ಮನೆಯ ಬಾಗಿಲು ತೆರೆಯಲು ಹಾಗೂ ಕತ್ತಲಾದ ನಂತರ ಹೊರಬರಲು ಹೆದರುತ್ತಿದ್ದಾರೆ.

ಕಳೆದ ಫೆ. 3ರಂದು ಪಟ್ಟಣದ ಅಶ್ವಿ‌ನಿ ಬಡಾವಣೆಯ ಬಸವಣ್ಣ ಎಂಬುವವರ ಮನೆಯ ಸಮೀಪದಲ್ಲಿ ಚಿರತೆಯೊಂದು ಕರುವೊಂದನ್ನು ತಿಂದುಹಾಕಿತ್ತು. ಅಲ್ಲದೇ ಮರುದಿನ ಸಮೀಪದ ಮಹದೇವಪ್ರಸಾದ್‌ ನಗರದಲ್ಲಿ ಮನೆಯ ಮುಂದೆ ಕಟ್ಟಿಹಾಕಿದ್ದ ಇನ್ನೊಂದು ಕರುವನ್ನು ಕೊಂದು ಹಾಕಿದ್ದ‌ರಿಂದ ನಾಗರಿಕರು ಮತ್ತಷ್ಟು ಭೀತಿಗೊಳಗಾಗಿದ್ದಾರೆ.

ಶುಕ್ರವಾರ ಮಡಹಳ್ಳಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪಕ್ಕೆ ಬಂದಿದ್ದ ಜನರು ಸಂಜೆ ವೇಳೆ ಚಿರತೆಯೊಂದು ಹಳ್ಳದತ್ತ ಸಾಗಿದ್ದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರವಿದ್ದು ಕಾನ್ವೆಂಟ್, ಪದವಿ ಕಾಲೇಜು, ನ್ಯಾಯಾಲಯ ಸಮುಚ್ಛಯ ಹಾಗೂ ಕಲ್ಯಾಣ ಮಂಟಪಗಳಿವೆ.

ಈ ಮಾರ್ಗದಲ್ಲಿ ಮಡಹಳ್ಳಿ, ಹೊನ್ನಶೆಟ್ಟರಹುಂಡಿ, ಹೊಂಗಹಳ್ಳಿ, ಬರಗಿ ಮುಂತಾದ ಗ್ರಾಮಗಳಿಗೆ ತೆರಳುವ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಭಯಪಡುತ್ತಿದ್ದಾರೆ. ಸುತ್ತಲೂ ಜಮೀನಿನಿದ್ದು, ಅಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವ ರೈತರೂ ತಮ್ಮ ಹಾಗೂ ಜಾನುವಾರುಗಳ ರಕ್ಷಣೆಯ ಬಗ್ಗೆ ಚಿಂತೆಗೊಳಗಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next