ಮಂಡ್ಯ: ವಿಶ್ವ ವಿಖ್ಯಾತ ಕೆಆರ್‌ಎಸ್ ಬೃಂದಾವನದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಆತಂಕ ಉಂಟು ಮಾಡುತ್ತಿರುವ ಚಿರತೆ ಸೆರೆ ಹಿಡಿಯಲು ಗುರುವಾರ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ರುತ್ರೇನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಳಿ ಮಾಡದಂತೆ ಕ್ರಮ: ಕೆಆರ್‌ಎಸ್ ವ್ಯಾಪ್ತಿಯ ಅರಣ್ಯ ಪ್ರದೇಶವಾಗಿದ್ದು, ವಿಶಾಲವಾಗಿದೆ. ಅಲ್ಲದೆ, ತುಂಬಾ ವ್ಯತ್ಯಾಸಗಳಿಂದ ಕೂಡಿದೆ. ಆದ್ದರಿಂದ ಚಿರತೆ ಹಿಡಿಯಲು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಚಿರತೆ ಚಲನ ವಲನ ಗುರುತಿಸಿ ಹಾಗೂ ಮನುಷ್ಯರ ಮೇಲೆ ದಾಳಿ ಮಾಡದಂತೆ ಕ್ರಮ ವಹಿಸಲಾಗುತ್ತಿದೆ ಎಂದರು.
ಚಿರತೆ ಹಗಲು ವೇಳೆ ದಾಳಿ ಮಾಡುವ ಸಾಧ್ಯತೆ ಇಲ್ಲ. ಆದರೆ ರಾತ್ರಿ ವೇಳೆ ದಾಳಿ ಮಾಡುವ ಸಾಧ್ಯತೆ ಇದೆ. ಆದರೆ, ರಾತ್ರಿ ವೇಳೆಯಲ್ಲಿ ಸಂಪೂರ್ಣ ಬಂದ್ ಆಗುವುದರಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಅದನ್ನು ಶೀಘ್ರ ಸೆರೆ ಹಿಡಿಯಲಾಗುವುದು ಎಂದು ತಿಳಿಸಿದರು.
ಪ್ರವಾಸಿಗರ ನಿರ್ಬಂಧದಿಂದ ನಷ್ಟ: ಚಿರತೆ ಹಾವಳಿಯಿಂದಾಗಿ ಬೃಂದಾವನ ನಿರ್ಬಂಧ ಹೇರಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮಕ್ಕೆ ಸುಮಾರು 50 ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಕಳೆದ 25 ದಿನಗಳಿಂದ ಚಿರತೆ ಸೆರೆ ಹಿಡಿಯದ ಹಿನ್ನೆಲೆ ಸ್ಥಳೀಯರು, ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಾರಾಂತ್ಯದಲ್ಲಿ ಹೆಚ್ಚು ಮಂದಿ:ಪ್ರತಿದಿನ 3ರಿಂದ 4 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಾರಾಂತ್ಯಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬೃಂದಾವನ ಪ್ರವೇಶಿಸುತ್ತಿದ್ದರು. ಒಬ್ಬರಿಗೆ 50 ರೂ. ಟಿಕೆಟ್ ನಿಗದಿಪಡಿಸಲಾಗಿದೆ. ಆದರೆ, ಬೃಂದಾವನ ಬಂದ್‌ನಿಂದ ನಿಗಮಕ್ಕೆ ಆದಾಯ ಬಾರದಂತಾಗಿದೆ. ಅಲ್ಲದೆ, ಅಲ್ಲಿನ ವ್ಯಾಪಾರಿಗಳಿಗೂ ವ್ಯಾಪಾರವಿಲ್ಲದೆ ಸಂಕಷ್ಟ ಎದುರಾಗಿದೆ.
60 ಕಡೆ ಕ್ಯಾಮೆರಾ, 8 ಕಡೆ ಬೋನು
ಚಿರತೆ ಸೆರೆಗೆ ಶ್ರೀರಂಗಪಟ್ಟಣ, ಪಾಂಡವಪುರ ವಲಯದಿಂದ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಚಿರತೆ ಗುರುತಿಸಲು 60 ಕಡೆ ಕ್ಯಾಮೆರಾ ಅಳವಡಿಸಲಾಗಿದೆ. 8 ಬೋನು ಇರಿಸಲಾಗಿದೆ. ಚಿರತೆ ಓಡಾಟದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಡ್ರೋನ್ ಮೂಲಕವೂ ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಕೂಬಿಂಗ್ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿ ಕಾರಿ ರುತ್ರೇನ್ ಹೇಳಿದರು.