ಬಜಪೆ: ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಕರುವನ್ನು ಕೊಂದು, ನಂತರ ಹೊಟ್ಟೆ ಭಾಗವನ್ನು ತಿಂದು ಹಾಕಿದ ಘಟನೆ ಕಳೆದ ರಾತ್ರಿ ಇಲ್ಲಿನ ಪೆರ್ಮುದೆಯಲ್ಲಿ ನಡೆದಿದೆ.
ಮಂಗಳೂರಿನ ಪೆರ್ಮುದೆ ಹುಣ್ಸೆಕಟ್ಟೆ ನಿವಾಸಿ ಮೇರಿ ಡಿಸೋಜಾ ಅವರ ಮನೆಯ ಕರುವನ್ನು ಚಿರತೆ ಕೊಂದು ಹಾಕಿದೆ.
ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಚಿರತೆ ಹಟ್ಟಿ ಬಾಗಿಲನ್ನು ಸರಿಸಿ ಒಳಗೆ ಹೋಗಿ ಕರುವಿನ ಮೇಲೆ ದಾಳಿ ಮಾಡಿತ್ತು. ಕರುವಿನ ಬೊಬ್ಬೆ ಮಾಡಿದಾಗ ಶಬ್ಧಕ್ಕೆ ಎಚ್ಚರಗೊಂಡ ಮನೆಯವರು ಮತ್ತು ಅಕ್ಕಪಕ್ಕದವರು ಬಂದು ನೋಡಿದಾಗ ದೂರದಲ್ಲಿ ಚಿರತೆ ಓಡಿಹೋಗಿದ್ದು ಕಂಡು ಬಂದಿತ್ತು.
ಹಟ್ಟಿಯನ್ನು ಗಮನಿಸಿದಾಗ ಅಲ್ಲಿ ಕರು ಸತ್ತು ಬಿದ್ದಿತ್ತು. ಕರುವಿನ ಮುಂದಿನ ಕ್ರಿಯೆಯನ್ನು ಮುಂಜಾನೆ ಮಾಡುವುದೆಂದು ಹಟ್ಟಿ ಬಾಗಿಲನ್ನು ಭದ್ರಗೊಳಿಸಿ ಮಲಗಿದ್ದರು. ಮನೆಯವರು ಮಲಗಿದ ನಂತರ ಮತ್ತೆ ಬಂದಿದ್ದ ಚಿರತೆ ಮತ್ತೊಂದು ಬಾಗಿಲಿನ ಮೂಲಕ ಹಟ್ಟಿ ಪ್ರವೇಶ ಮಾಡಿತ್ತು. ಕರುವನ್ನು ಸ್ವಲ್ಪ ಎಳೆದು ಹಟ್ಟಿಯ ಮತ್ತೊಂದು ಭಾಗದಲ್ಲಿ ಹಾಕಿ ಹೊಟ್ಟೆಯ ಭಾಗವನ್ನು ಬಗೆದು ತಿಂದು ಹೋಗಿದೆ.
ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಹಲವಾರು ನಾಯಿಗಳು ಕೂಡಾ ಕಾಣೆಯಾಗಿದ್ದವು. ಈಗ ಚಿರತೆ ಹಟ್ಟಿಗೆ ನುಗ್ಗಿದ್ದು ಗ್ರಾಮಸ್ಥರನ್ನು ಮತ್ತಷ್ಟು ಭಯಗೊಳಿಸಿದ್ದು, ಆದಷ್ಟು ಬೇಗ ಚಿರತೆ ಹಿಡಿಯಬೆಕೆಂದು ಆಗ್ರಹಿಸಿದ್ದಾರೆ.