Advertisement

Mundgod; ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

04:24 PM Aug 06, 2023 | Team Udayavani |

ಮುಂಡಗೋಡ: ಪಟ್ಟಣ ವ್ಯಾಪ್ತಿಯ ಜನಬಿಡಿ ಪ್ರದೇಶ ಖಬರಸ್ತಾನದ (ಸ್ಮಶಾನ) ಅಕ್ಕ ಪಕ್ಕದಲ್ಲಿ ಕಳೆದ ಎರಡ್ಮೂರು ದಿನದಿಂದ ಚಿರತೆಯೂ ಓಡಾಡುತ್ತಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.

Advertisement

ಮುಂಡಗೋಡ ಕಲಘಟಗಿ ರಾಜ್ಯ ಹೆದ್ದಾರಿ ಮತ್ತು ಪಟ್ಟಣಕ್ಕೆ ಹತ್ತಿರ ಇರುವ ಮುಸ್ಲಿಂ ಸಮುದಾಯದ ಖಬರಸ್ತಾನ(ಸ್ಮಶಾನ) ಹತ್ತಿರ ಚಿರತೆ ಪ್ರತ್ಯಕ್ಷವಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನ ಮತ್ತು ಬೈಕ್ ಒಡಾಡುತ್ತವೆ. ಅಲ್ಲದೆ ಹತ್ತಿರವೇ ಜನರು ವಾಸಿಸುವ ಬಡಾವಣೆಗಳು ಇದೆ. ಶನಿವಾರ ಸಂಜೆ ಹಾಲೇಶ ಎಂಬಾತನು ಖಬರಸ್ತಾನ (ಸ್ಮಶಾನ) ಕಾಂಪೌಂಡ್ ನ ಮೇಲೆ ಚಿರತೆ ಓಡಾಡುತ್ತಿರುವುದು ನೋಡಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಆ ಭಾಗದ ರೈತರನ್ನು ಚಿಂತೆಗೆ ಈಡುಮಾಡಿದೆ.

ಅರಣ್ಯ ಅಧಿಕಾರಿಗಳು ಭೇಟಿ: ಚಿರತೆಯೂ ಪಟ್ಟಣದ ಹತ್ತಿರವೇ ಓಡಾಡುತ್ತಿದೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ರವಿವಾರ ಇಲ್ಲಿನ ವಲಯ ಅರಣ್ಯಧಿಕಾರಿ ಸುರೇಶ ಕುಳ್ಳೊಳ್ಳಿ ಉಪವಲಯ ಅರಣ್ಯಧಿಕಾರಿ ಗಿರೀಶ ಕೊಳೆಕರ್ ಹಾಗೂ ಮುತ್ತು ಹಿರೇಕನಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಸ್ಥಳದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಆ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ.

ಧ್ವನಿವರ್ಧಕದ ಮೂಲಕ ಜಾಗೃತಿ: ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಹಳೂರ, ಮಾರಿಕಾಂಬಾ ನಗರ ಕೊಪ್ಪದ ಓಣಿ, ಪಟ್ಟಣದ ನಿವಾಸಿಗಳು ಮತ್ತು ಬೈಕ ಸವಾರರಿಗೆ ಚಿರತೆ ಓಡಾಡಿದ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡುಬಾರದು, ರಾತ್ರಿ ಸಮಯ ಆ ಪ್ರದೇಶದಲ್ಲಿ ಹೋಗಬಾರದು. ಆಕಸ್ಮಾತ ಹೋಗಬೇಕಾದರೆ ಗುಂಪು ಗುಂಪಾಗಿ ತೆರಳುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.

ಈ ಹಿಂದೆ ತಾಲೂಕಿನ ಗಡಿ ಭಾಗ ಮತ್ತು ಶಿಗ್ಗಾಂವ ದುಂಡಸಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ವಡಗಟ್ಟ ಮತ್ತು ತಾಯವ್ವ ಗುಡಿಯ ಅಕ್ಕ ಪಕ್ಕದಲ್ಲಿ ವಾಹನ ಸವಾರರಿಗೆ ಚಿರತೆ ಆಗಾಗ ಪ್ರತ್ಯಕ್ಷವಾಗುತ್ತಿತ್ತು ಅಲ್ಲದೆ ಚಿರತೆಯೂ ಮುಖ್ಯ ರಸ್ತೆ ದಾಟುವುದು ಅನೇಕರು ನೋಡಿ ಭಯ ಭೀತರಾಗಿದ್ದರು. ಇದಲ್ಲದೆ ತಾಲೂಕಿನ ಅತ್ತಿವೇರಿ ಗೌಳಿದಡ್ಡಿಯ ಹತ್ತಿರ ಗೌಳಿ ಸಮುದಾಯದ ಹಲವು ಜಾನುವಾರಗಳ ಮೇಲೆ ದಾಳಿ ಮಾಡಿರುವುದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

ವಲಯ ಅರಣ್ಯಧಿಕಾರಿ ಸುರೇಶ ಕುಳ್ಳೊಳ್ಳಿ ಪ್ರತಿಕ್ರಿಯಿಸಿ: ಆ ಪ್ರದೇಶದಲ್ಲಿ ಓಡಾಡಿದ ಹೆಜ್ಜೆ ಗುರುತು ಚಿರತೆಯದೆ ಆಗಿದೆ. ಮತ್ತು ಪ್ರತ್ಯಕ್ಷದರ್ಶಿ ಹಾಲೇಶ ಎಂಬಾತನಿಗೆ ಕರೆದು ಕೇಳಿದ್ದೇವೆ ಆತನು ಸಹ ನಾನು ಚಿರತೆಯನ್ನು ನೋಡಿದ್ದೇನೆ ಎಂದಿದ್ದಾನೆ. ಅಲ್ಲದೆ ವಿಡಿಯೋ ಸಹ ತೋರಿಸಿದ್ದಾನೆ. ಈಗಾಗಲೇ ಆ ಪ್ರದೇಶದಲ್ಲಿ ಚಿರತೆ ಪತ್ತೆ ಹಚ್ಚಲು ನಮ್ಮ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಜನರಲ್ಲಿ ಧ್ವನಿವರ್ಧಕದಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಒಟ್ಟಿನಲ್ಲಿ ಈ ಹಿಂದೆ ಗಡಿ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ನಾಗರಿಕರಲ್ಲಿ ಭಯ ಮೂಡಿಸುತ್ತಿತ್ತು ಈಗ ಪಟ್ಟಣದ ಮತ್ತು ಜನದಟ್ಟಣೆ ಪ್ರದೇಶ ಹತ್ತಿರವೇ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಭಯದ ವಾತವರಣ ಸೃಷ್ಟಿ ಮಾಡಿದೆ. ಹಾಗಾಗಿ ಆದಷ್ಟೂ ಬೇಗಸಂಬಂಧಪಟ್ಟ ಇಲಾಖೆಯವರು ಇದನ್ನು ಸೆರೆ ಹಿಡಿದು ಜನರಲ್ಲಿ ಕಾಡುತ್ತಿರುವ ಭಯವನ್ನು ದೂರ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next