Advertisement

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

03:03 PM May 04, 2024 | Team Udayavani |

ಸಕಲೇಶಪುರ: ಈಗಾಗಲೇ ಕಾಡಾನೆ, ಕೋಣದ ಹಾವಳಿಯಿಂದ ತತ್ತರಿಸಿರುವ ಮಲೆನಾಡು ಭಾಗದ ರೈತರಿಗೆ ಇದೀಗ ಚಿರತೆ ಹಾವಳಿ ಎದುರಿಸುವ ಪರಿಸ್ಥಿತಿ ಎದುರಾಗಿದೆ.

Advertisement

ನೆರೆಯ ಜಿಲ್ಲೆಗಳಲ್ಲಿ ಸೆರೆಹಿಡಿದ ಚಿರತೆಗಳನ್ನು ಅರಣ್ಯ ಇಲಾಖೆ ಬಿಸಿಲೆ ರಕ್ಷಿತಾರಣ್ಯಕ್ಕೆ ಸದ್ದಿಲ್ಲದೆ ತಂದು ಬಿಡುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಕೆಲವು ತಿಂಗಳ ಹಿಂದೆ ಅರಣ್ಯ ಇಲಾಖೆ ತುಮಕೂರು ಜಿಲ್ಲೆಯಲ್ಲಿ ಹಿಡಿದ ಚಿರತೆಯನ್ನು ಬಿಸಿಲೆ ಭಾಗದಲ್ಲಿ ಬಿಟ್ಟಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಚಿರತೆಯು ಹಲವು ಜಾನುವಾರುಗಳನ್ನು ತಿಂದು ಆತಂಕದ ಪರಿಸ್ಥಿತಿ ಹುಟ್ಟಿಹಾಕಿತ್ತು. ಇದೇ ರೀತಿ ಬುಧವಾರ ರಾತ್ರಿ ಆಲೂರು ತಾಲೂಕಿನಲ್ಲಿ ಹಿಡಿದ ಚಿರತೆಯನ್ನು ಇಲಾಖೆಯ ವಾಹನದಲ್ಲಿ ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಡಲು ಹೋಗುತ್ತಿದ್ದಾಗ ಮಂಕನಹಳ್ಳಿ ಗ್ರಾಮಸ್ಥರು ವಿಷಯ ತಿಳಿದು ವಾಹನ ಅಡ್ಡಹಾಕಿ ಪ್ರತಿಭಟನೆ ಮಾಡಿದ್ದರು. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ವಾಪಸ್‌ ತೆಗೆದುಕೊಂಡು ಹೋಗಿದ್ದಾರೆ.

ಹೊರಜಿಲ್ಲೆಗಳಲ್ಲಿ ಉಪಟಳ ನೀಡುತ್ತಿರುವ ಚಿರತೆಗಳನ್ನು ತಂದು ತಾಲೂಕಿನಲ್ಲಿ ಬಿಡುತ್ತಿರುವ ಕೆಲ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. ರಾತ್ರೋರಾತ್ರಿ ಎಷ್ಟು ಪ್ರಾಣಿಗಳು ಅರಣ್ಯ ಇಲಾಖೆ ತಂದು ಬಿಟ್ಟಿದಿಯೋ ಎಂಬ ಆತಂಕ ಬಿಸಿಲೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಉಂಟು ಮಾಡಿದೆ.

ಚಿರತೆ ಮಾತ್ರವಲ್ಲದೆ ವಿಷಕಾರಿ ಕಾಳಿಂಗಸರ್ಪ, ಕೊಳಕು ಮಂಡಲದಂತಹ ಹಾವುಗಳನ್ನೂ ಅರಣ್ಯ ಇಲಾಖೆಯವರು ಬಿಸಿಲೆ ಸುತ್ತಮುತ್ತ ಬಿಡುತ್ತಿದ್ದಾರೆ ಎಂಬ ಆರೋಪ ಇದೆ. ಬಿಸಿಲೆ ಸುತ್ತಮುತ್ತಲಿನ ಗ್ರಾಮಗಳಾದ ಮಂಕನಹಳ್ಳಿ, ಮಾವನೂರು, ಹುದಿನೂರು, ಆನೆಗುಂಡಿ, ಹೊನ್ನಾಟ್ಲು, ಪಟ್ಲ ಮುಂತಾದ ಗ್ರಾಮಗಳಲ್ಲಿ ಜನ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಪ್ರಮುಖವಾಗಿ ಕಾಫಿ, ಏಲಕ್ಕಿ, ಅಡಕೆ ಬೆಳೆಯಲಾಗುತ್ತದೆ. ತೋಟಗಳ ನಿರ್ವಹಣೆ ಮಾಡಲು ಕೂಲಿ ಕಾರ್ಮಿಕರು ಸಿಗದೆ ರೈತರು ತತ್ತರಿಸಿದ್ದಾರೆ. ಹವಮಾನ ವೈಪರೀತ್ಯವೂ ರೈತರನ್ನು ಕಷ್ಟಕ್ಕೆ ತಳ್ಳಿದೆ. ಅಲ್ಲದೆ, ಕಾಡಾನೆ, ಕಾಡು ಹಂದಿ, ಕಾಡು ಕೋಣ, ಮಂಗಗಳ ಹಾವಳಿಯಿಂದ ಕಷ್ಟಪಟ್ಟು ಬೆಳೆಯುವ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿರತೆಗಳು ತಂದು ಬಿಟ್ಟರೆ ತೋಟದ ಕೆಲಸಕ್ಕೆ ಜನ ಎಲ್ಲಿ ಬರುತ್ತಾರೆ ಎಂಬ ಆತಂಕ ಮಾಲೀಕರದ್ದಾಗಿದೆ.

Advertisement

ಚಿರತೆಯಂತಹ ಅಪಾಯಕಾರಿ ಪ್ರಾಣಿಗಳನ್ನು ಮಲೆನಾಡು ಭಾಗದಲ್ಲಿ ಬಿಡಬಾರದು. ಒಂದು ವೇಳೆ ಬಿಟ್ಟರೆ ಮುಂದಿನ ದಿನಗಳಲ್ಲಿ ಬಿಸಿಲೆ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಚಿರತೆಯನ್ನು ಬಿಸಿಲೆ ರಕ್ಷಿತಾರಣ್ಯದಲ್ಲಿ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಇತರೆ ಪ್ರದೇಶಗಳಲ್ಲಿ ಹಿಡಿದ ವನ್ಯಜೀವಿಗಳನ್ನು ಮಲೆನಾಡು ಭಾಗಕ್ಕೆ ಬಿಡದಂತೆ ಕ್ರಮ ಕೈಗೊಳ್ಳಲಾಗುವುದು.-ಮಹಾದೇವ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ.

ಅರಣ್ಯ ಇಲಾಖೆ ಬಿಸಿಲೆ ಭಾಗದಲ್ಲಿ ಕಾಡುಪ್ರಾಣಿಗಳನ್ನು ತಂದು ಬಿಡುವುದು ಸರಿಯಲ್ಲ, ಚಿರತೆಗಳು ಯಾವುದೇ ಸಂದರ್ಭದಲ್ಲಿ ಮನುಷ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿದೆ. ಈಗಾಗಲೇ ಕಾಡಾನೆ, ಕಾಡು ಕೋಣಗಳ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಮತ್ತೂಮ್ಮೆ ಯಾರಾದರು ಚಿರತೆಯಂತಹ ಪ್ರಾಣಿಗಳನ್ನು ಇಲ್ಲಿ ಬಿಡಲು ಬಂದರೆ ಉಗ್ರ ಹೋರಾಟ ಮಾಡಲಾಗುತ್ತದೆ.-ಗಣೇಶ್‌, ಗ್ರಾಮಸ್ಥರು, ಹುದಿನೂರು.

ಈಗಾಗಲೇ ಮಲೆನಾಡಿನ ಜನ ಕಾಡಾನೆಗಳ ಹಾವಳಿಯಿಂದ ತತ್ತರಿಸಿದ್ದಾರೆ. ಇನ್ನು ಚಿರತೆಯಂತಹ ಅಪಾಯಕಾರಿ ಪ್ರಾಣಿಯನ್ನು ಅರಣ್ಯ ಇಲಾಖೆ ಹೊರ ಊರುಗಳಿಂದ ಇಲ್ಲಿಗೆ ತಂದು ಬಿಡುವುದು ಸರಿಯಲ್ಲ. ಮತ್ತೂಮ್ಮೆ ಈ ರೀತಿಯ ಬೆಳವಣಿಗೆ ಆಗದಂತೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು.-ಸಿಮೆಂಟ್‌ ಮಂಜು, ಶಾಸಕರು. 

-ಸುಧೀರ್‌ ಎಸ್‌.ಎಲ್‌.

Advertisement

Udayavani is now on Telegram. Click here to join our channel and stay updated with the latest news.

Next