ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬರುವುದು ಸಾಮಾನ್ಯವಾಗಿ ಬಿಟ್ಟಿದೆ, ಅದೇ ರೀತಿ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿರುವ ಆಸ್ಪತ್ರೆಯೊಂದಕ್ಕೆ ಚಿರತೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.
ಆಸ್ಪತ್ರೆಯೊಳಗೆ ರೋಗಿಗಳು ಇದ್ದ ವೇಳೆ ರಾತ್ರೋ ರಾತ್ರಿ ಚಿರತೆಯೊಂದು ಆಸ್ಪತ್ರೆ ಕಟ್ಟಡದ ಒಳಗೆ ಪ್ರವೇಶಿಸಿದೆ. ಇದನ್ನು ಗಮನಿಸಿದ ಆಸ್ಪತ್ರೆಯ ಸಿಬಂದಿ ಕೂಡಲೇ ಸಮಯ ಪ್ರಜ್ಞೆ ಮೆರೆದು ರೋಗಿಗಳು ಇರುವ ಕೊಠಡಿಯ ಬಾಗಿಲನ್ನು ಮುಚ್ಚಿ ಬಳಿಕ ಚಿರತೆ ಒಳಗೆ ಬಂದ ಬಾಗಿಲನ್ನು ಹೊರಗಿನಿಂದ ಬಂದು ಲಾಕ್ ಮಾಡಿದ್ದಾನೆ ಇದರಿಂದ ಚಿರತೆಗೆ ಹೊರಬರಲು ಸಾಧ್ಯವಾಗದೆ ಆಸ್ಪತ್ರೆಯೊಳಗೆ ಬಂಧಿಯಾಗಿದೆ.
ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿರುವ ಶಹದಾ ಪ್ರದೇಶದ ಆದಿತ್ಯ ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಯಲ್ಲಿ ಮಂಗಳವಾರ ಘಟನೆ ಸಂಭವಿಸಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಳಿಕ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್, ಚಿರತೆ ಆಸ್ಪತ್ರೆಗೆ ಬಂದ ನಂತರ ರೋಗಿಗಳು ಭಯಭೀತರಾಗಿದ್ದರೂ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸಿಕ್ಕಿಬಿದ್ದ ಪ್ರಾಣಿಯನ್ನು ನೋಡಲು ರೋಗಿಗಳ ಸಂಬಂಧಿಕರು ಸೇರಿದಂತೆ ಅನೇಕ ಜನರು ಆಸ್ಪತ್ರೆಯ ಹೊರಗೆ ಜಮಾಯಿಸಿದ್ದರು.