ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಪಟೇಲ್ ಕಾಲೋನಿಯಲ್ಲಿ ಕಳೆದ 3 ದಿನಗಳಿಂದ ಚಿರತೆ ಮರಿಗಳು ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಪಟೇಲ್ ಕಾಲೊನಿಯು ಮುಲ್ಲಾ ಮರದಡಿಯ ಪಕ್ಕದಲ್ಲಿರುವುದರಿಂದ ಪೊದೆಯಲ್ಲಿ ಕುಳಿತಿದ್ದ ಚಿರತೆ ಮರಿಗಳು ಕಳೆದ 3 ದಿನದಿಂದ ಪಟೇಲ್ ಕಾಲೋನಿ ಕೆಲವು ಬಡಾವಣೆಗಳಲ್ಲಿ ರಾತ್ರಿ ಹೊತ್ತು ತಿರುಗಾಡುತ್ತಿವೆ ಎಂದು ಅಲ್ಲಿನ ಮುಖಂಡರಾದ ಖಲೀಲ್ ಪಟೇಲ್ ತಿಳಿಸಿದ್ದಾರೆ .
ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಿದ್ಧಾರೂಢ ಹೊಕ್ಕುಂಡಿ, ನಟರಾಜ ಅವರು ಪೊದೆಯಲ್ಲಿ ಚಿರತೆ ಮರಿಗಳು ಇರಬಹುದೆಂದು ಊಹಿಸಿ ಗಿಡಗಂಟಿಗಳನ್ನು ತೆರವುಗೊಳಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಪಟೇಲ್ ಕಾಲೋನಿಯ ಚರಂಡಿ ಸುತ್ತಮುತ್ತ ಭಾರಿ ಹುಲ್ಲು ಬೆಳೆದು ಚರಂಡಿಯೇ ಹುಲ್ಲಿನ ಪೊದೆಗಳಲ್ಲಿ ಅವಿತುಕೊಂಡಿದೆ ಎಂದು ಜನರು ಹೇಳುತ್ತಿದ್ದಾರೆ. ಚಿರತೆ ಮರಿಗಳು ಕಾಣಿಸಿಕೊಂಡಿರುದರಿ೦ದ ಸಣ್ಣ ಪುಟ್ಟ ಮಕ್ಕಳು ರಾತ್ರಿ ಹೊತ್ತಿನಲ್ಲಿ ಮತ್ತು ಹಗಲಲ್ಲೂ ತಿರುಗಾಡಲು ಹೆದರುವಂತಾಗಿದೆ ಎಂದು ಮಸೂದ್ ಸೌದಾಗರ್ ತಿಳಿಸಿದ್ದಾರೆ.
ಪುರಸಭೆ ಉಪಾಧ್ಯಕ್ಷ ಶಬ್ಬೀರ್ ಸೌದಾಗರ್, ಸದಸ್ಯರಾದ ಮಸೂದ್ ಸೌದಾಗರ್, ಅಬ್ದುಲ್ ಬಾಸಿತ್ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ.