ಮಣಿಪಾಲ: ಕಳೆದ ಕೆಲವು ದಿನಗಳಿಂದ ವಿಜಯನಗರ ಕೋಡಿ ಎಂಬಲ್ಲಿ ಜನರಿಗೆ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ ಈ ಭಾಗದ ಜನರಲ್ಲಿ ಭೀತಿ ಹುಟ್ಟಿಸಿತ್ತು. ಪ್ರದೇಶದ ಮನೆಗಳ ದನಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಜನರು ರಾತ್ರಿ ಹೊರಬರುವುದನ್ನೇ ನಿಲ್ಲಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಗಳು ಚಿರತೆ ಸೆರೆ ಹಿಡಿಯಲು ಇಲಾಖೆಯವರು ಬೋನು ಇರಿಸಿದ್ದರು. ಬೋನಿನೊಳಗೆ ಎರಡು ನಾಯಿ ಮರಿಗಳನ್ನು ಕಟ್ಟಿ ಚಿರತೆ ಹಿಡಿಯಲು ಉಪಾಯ ಮಾಡಲಾಗಿತ್ತು.
ಅದರಂತೆ ಚಿರತೆ ಇಂದು ಮುಂಜಾನೆ ಬೋನಿಗೆ ಬಿದ್ದಿದೆ. ಚಿರತೆ ಉಪಟಳದಿಂದ ಭಯಭೀತರಾಗಿದ್ದ ಸುತ್ತಮುತ್ತಲಿನ ಜನರು ಅರಣ್ಯ ಇಲಾಖೆಯ ಕಾರ್ಯಕ್ಕೆ ಸಂತಸಗೊಂಡಿದ್ದಾರೆ.