Advertisement

ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

08:05 AM Dec 18, 2020 | keerthan |

ಗಂಗಾವತಿ: ಕಳೆದ 6-7 ತಿಂಗಳಿಂದ ತಾಲೂಕಿನ ಆನೆಗೊಂದಿ ಹನುಮನಹಳ್ಳಿ, ಜಂಗ್ಲಿ ರಂಗಾಪೂರ ಸುತ್ತಲಿನ‌ ಜನಜಾನುವಾರುಗಳಿಗೆ ತೀವ್ರ ಉಪಟಳ ನೀಡಿದ್ದ ಮತ್ತು ಒರ್ವ ಯುವಕನನ್ನು ಕೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿದ್ದ ಚಿರತೆಯನ್ನು ಬೋನಿನ ಮೂಲಕ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

Advertisement

ಆನೆಗೊಂದಿ ಆದಿಶಕ್ತಿ ದೇಗುಲದ ಹಿಂಭಾಗದಲ್ಲಿ ಯುವಕನನ್ನು ಕೊಂದು ಹಾಕಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸತತ ಯತ್ನ ನಡೆಸಿತ್ತು. 16 ಕಡೆ ಬೋನುಗಳನ್ನು ಇರಿಸಲಾಗಿತ್ತು. ಡ್ರೋಣ್ ಕ್ಯಾಮರಾ ಮತ್ತು‌ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಿರತೆಗಳ ಚಲನವಲನಗಳನ್ನು ಗಮನಿಸಲಾಗಿತ್ತು.

ಎರಡು ದಿನಗಳ ಹಿಂದೆ ಸಂಗಾಪೂರ ಶ್ರೀರಂಗದೇವರಾಯಲು ನಗರದಲ್ಲಿ 9 ವರ್ಷದ ಬಾಲಕ ಮೇಲೆ ದಾಳಿ ಮಾಡಿದ್ದ ಚಿರತೆ ತೀವ್ರ ಗಾಯಗೊಳಿಸಿತ್ತು. ಈ ಮಧ್ಯೆ ಚಿರತೆ ಸೆರೆಹಿಡಿದು ಜನರಿಗೆ ರಕ್ಷಣೆ ನೀಡುವಂತೆ ವ್ಯಾಪಕ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಅರಣ್ಯ ಸಚಿವ ಆನಂದ ಸಿಂಗ್ ರನ್ನು ಸಂಪರ್ಕ ಮಾಡಿ ತಜ್ಞರನ್ನು ಕಳಿಸಿ ಚಿರತೆ ಕರಡಿಗಳನ್ನು ಸೆರೆ ಹಿಡಿಯಲು ಮನವಿ ಮಾಡಿದ್ದರು.

ಇದನ್ನೂ ಓದಿ:ಹರಾಜಿಗೆ “ಅನರ್ಹ” ಅಸ್ತ್ರ: ಗ್ರಾ.ಪಂ. ಚುನಾವಣೆ: ಬಿಗಿ ಕ್ರಮಕ್ಕೆ ಚುನಾವಣ ಆಯೋಗ ಚಿಂತನೆ

ಗುರುವಾರ ಬಳ್ಳಾರಿ ದರೋಜಿ ಕರಡಿಧಾಮ‌ ಹಾಗೂ ಎಸ್ ವೈ ಎಸ್ ಸ್ವಯಂ ಸೇವಾ ಸಂಸ್ಥೆಯ ತಜ್ಞರು ಆಗಮಿಸಿ ಇನ್ನಷ್ಟು ಸಿಸಿ ಕ್ಯಾಮರಾಗಳು ಮತ್ತು ಚಿರತೆ ಕರಡಿಗಳ ಹೆಜ್ಜೆ ಗುರುತಿಸುವ ಉಪಕರಣಗಳನ್ನು ಇರಿಸಿದ್ದರು. ಇದೀಗ ಚಿರತೆಯಯು ಬೋನಿಗೆ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಪ್ರಾಣಿಸಂಗ್ರಹಾಲಯಕ್ಕೆ ಚಿರತೆ ರವಾನೆ ಸಾಧ್ಯತೆ: ಆನೆಗೊಂದಿ ಹತ್ತಿರ ಸೆರೆ ಸಿಕ್ಕಿರುವ ಸುಮಾರು 05 ವರ್ಷದ ಚಿರತೆಗೆ ವೈದ್ಯಕೀಯ ಪರೀಕ್ಷೆಗಾಗಿ ಅರವಳಿಕೆ ಚುಚ್ಚುಮದ್ದು ನೀಡಿ ಬೆಟ್ಟದಿಂದ ಕೆಳಗೆ ತಂದು‌ ವೈದ್ಯಕೀಯ ಪರೀಕ್ಷೆ ನಂತರ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಾಣಿಸಂಗ್ರಹಾಲಯಕ್ಕೆ ಕಳಿಸುವ ಸಾಧ್ಯತೆ ಇದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next