ಭದ್ರಾವತಿ : ಇಲ್ಲಿನ ವಿಐಎಸ್‌ಎಲ್ ಕ್ವಾರ್ಟರ್ಸ್ ಆವರಣದಲ್ಲಿ ಬುಧವಾರ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಯಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿ ಯಾಗಿದ್ದಾರೆ.
ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಅರವಳಿಕೆ ನೀಡಿದ ಬಳಿಕ, ಚಿರತೆಯನ್ನು ಬೋನ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಡಾ.ವಿನಯ್ ಅವರು ಧೈರ್ಯ ತೋರಿ 10 ಮೀ. ಅಂತರದಲ್ಲೇ ಚಿರತೆಗೆ ಅರವಳಿಕೆ ನೀಡಿದ್ದಾರೆ.
ನಿಟ್ಟುಸಿರು ಬಿಟ್ಟ ಸ್ಥಳೀಯರು
ಚಿರತೆ ಸೆರೆ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಚಿರತೆ ಸುಮಾರು 5-6 ವರ್ಷ ಪ್ರಾಯದ ಗಂಡಾಗಿದ್ದು, ಅದಕ್ಕೆ ನೀಡಿರುವ ಅರವಳಿಕೆ ಮತ್ತು ಇಳಿದ ನಂತರ, ಹಿರಿಯ ಅಧಿಕಾರಿಗಳ ನಿರ್ದೇಶನದ ಬಳಿಕ ಭದ್ರಾ ಅಭಯಾರಣ್ಯದ ವ್ಯಾಪ್ತಿಯ ಕಾಡಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾಯಿಬಾಬಾ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.