ದೇವದುರ್ಗ (ರಾಯಚೂರು): ತಾಲೂಕಿನ ಕರಡಿಗುಡ್ಡ ಪಕ್ಕದಲ್ಲಿ ಕಂಬದಾಳ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸುತ್ತಲಿನ ಗ್ರಾಮಸ್ಥರು ಕೊಂದು ಹಾಕಿದ ಘಟನೆ ನಡೆದಿದೆ.
ಬೆಳಗ್ಗೆ ಊರ ಹೊರಗಿನ ಗುಡ್ಡದಲ್ಲಿ ಚಿರತೆ ದಾಳಿ ಮಾಡಿತ್ತು. ಇದರಲ್ಲಿ ರಮೇಶ, ಮಲ್ಲಣ್ಣ, ರಂಗನಾಥ ಎನ್ನವವರಿಗೆ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸುತ್ತಲಿನ ಗ್ರಾಮಸ್ಥರು ಚಿರತೆ ಜಾಗ ಪತ್ತೆ ಹಚ್ಚಿ ಮನಸೊ ಇಚ್ಛೆ ಹಲ್ಲೆ ಮಾಡಿದ್ದು, ಚಿರತೆ ಪ್ರಾಣ ಕಳೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ, ನಾವು ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಇರಿಸಿದ್ದೆವು. ಅಲ್ಲದೇ, ವಿವಿಧ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ಕೂಡ ನೀಡಿದ್ದೆವು. ಆದರೂ ಈ ರೀತಿ ಘಟನೆ ನಡೆದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.