ವಾಡಿ : ರಾತ್ರಿ ವೇಳೆ ಹೊಲದಲ್ಲಿ ಕಟ್ಟಲಾಗಿದ್ದ ಹಸುವೊಂದು ಕಾಡು ಮೃಗವೊಂದರ ದಾಳಿಗೆ ಬಲಿಯಾದ ಘಟನೆ ಲಾಡ್ಲಾಪುರ ಸಮೀಪದ ಅಣ್ಣಿಕೇರಾ ಗ್ರಾಮದ ಪರಿಸರದಲ್ಲಿ ಸಂಭವಿಸಿದ್ದು, ಚಿರತೆಯೇ ಆಕಳ ರಕ್ತ ಕುಡಿದಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಣ್ಣಿಕೇರಾ ತಾಂಡಾದ ರಮೇಶ ಶಂಕರ ಜಾಧವ ಎಂಬುವವರಿಗೆ ಸೇರಿದ ಹಸು ಚಿರತೆ ಬಾಯಿಗೆ ಆಹಾರವಾಗಿದೆ ಎನ್ನಲಾಗಿದ್ದು, ರವಿವಾರ ರಾತ್ರಿ ಎಂದಿನಂತೆ ಎರಡು ಎತ್ತು ಮತ್ತು ಎರಡು ಆಕಳನ್ನು ತಮ್ಮ ಹೊಲದಲ್ಲಿ ಕಟ್ಟಿ ಮನೆಗೆ ಬಂದಿದ್ದಾರೆ. ಅಣ್ಣಿಕೇರಾ, ಲಾಡ್ಲಾಪುರ, ಅಳ್ಳೊಳ್ಳಿ, ದಂಡಗುಂಡ ಗ್ರಾಮಗಳು ಗುಡ್ಡಗಾಡು ಅರಣ್ಯ ಪ್ರದೇಶಗಳಿಂದ ಕೂಡಿದ್ದರಿಂದ ಈ ಹಿಂದೆ ಇಲ್ಲಿ ಅನೇಕ ಸಲ ಚಿರತೆ ಪ್ರತ್ಯಕ್ಷವಾಗಿರುವ ವದಂತಿಗಳು ಹರಿದಾಡಿದ್ದವು. ರವಿವಾರ ರಾತ್ರಿ ಕಟ್ಟಲಾದ ಹಸು ಸೋಮವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಸುವಿನ ಕತ್ತು ಮತ್ತು ಹಿಂಬಾಗ ಕಾಡು ಪ್ರಾಣಿಯ ಬಾಯಿಗೆ ಆಹಾರವಾಗಿದೆ. ಇದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಶು ವೈದ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಸುವಿನ ಕತ್ತಿಗೆ ಬಾಯಿ ಹಾಕಿ ರಕ್ತ ಹೀರಿದ ಬಳಿಕ ಮೃಗವು ಹಸುವಿನ ಬಾಲದ ಭಾಗವನ್ನು ಕತ್ತರಿಸಿ ತಿಂದಿದೆ. ಉಳಿದ ಎರಡು ಎತ್ತು ಹಾಗೂ ಇನ್ನೊಂದು ಆಕಳಿಗೆ ಯಾವೂದೇ ಹಾನಿಯಾಗಿಲ್ಲ. ಇದು ಖಚಿತವಾಗಿ ಚಿರತೆಯ ದಾಳಿಯೇ ಆಗಿದೆ ಎಂದು ಗ್ರಾಮಸ್ಥರು ಸಂಶಯ ಸ್ಪಷ್ಟಪಡಿದ್ದಾರೆ ಎಂದು ಗ್ರಾಮದ ಮುಖಂಡ ರತ್ನಮಣಿ ರಾಠೋಡ ಪ್ರತಿಕ್ರೀಯಿಸಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ: ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಆತಂಕ ಸೃಷ್ಠಿಯಾಗಿದ್ದು, ಚಿರತೆಯ ಹೆಸರು ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇಷ್ಟುದಿನ ಚಿರತೆ ಪ್ರತ್ಯಕ್ಷವಾಗಿದೆ ಎಂದು ವದಂತಿ ಹಬ್ಬಿಸಲಾಗುತ್ತಿತ್ತು. ಆದರೆ ಈ ಘಟನೆಯಿಂದ ಚಿರತೆ ನಮ್ಮೂರ ಸುತ್ತಮುತ್ತ ಫೇರಿ ಹೊಡೆಯುತ್ತಿದೆ ಎಂಬುದು ಖಾತ್ರಿಯಾಗಿದೆ. ಹಗಲು ಹೊತ್ತಿನಲ್ಲಿ ಮಹಿಳೆಯರು, ಮಕ್ಕಳು, ರೈತರು, ದನ-ಕುರಿ ಕಾಯುವವರು ಅಡವಿಗೆ ಹೋಗುತ್ತಾರೆ. ಈ ವೇಳೆ ಚಿರತೆ ದಾಳಿ ನಡೆಸಿದರೆ ಹೇಗೆ ಎಂಬ ಚಿಂತೆ ಸ್ಥಳೀಯರನ್ನು ಕಾಡುತ್ತಿದೆ. ಲಾಡ್ಲಾಪುರ ಹಾಗೂ ಅಣ್ಣಿಕೇರಾ ಗ್ರಾಮಸ್ಥರಲ್ಲಿ ಚಿರತೆಯಿಂದ ಜೀವ ಭಯ ಎದುರಾಗಿದ್ದು, ಜನರು ನಿದ್ದೆಗೆಟ್ಟು ಕುಳಿತಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ; ಒಮಿಕ್ರಾನ್ ಏರಿಕೆ
“ಅಣ್ಣಿಕೇರಾ ಗ್ರಾಮದ ಹೊಲದಲ್ಲಿ ಕಟ್ಟಿದ್ದ ಹಸು ಮೃತಪಟ್ಟಿದೆ. ಹಸುವಿನ ಕತ್ತು ಮತ್ತು ಹಿಂಭಾಗವನ್ನು ಮೃಗವೊಂದು ಹರಿದು ತಿಂದಿರುವುದು ಖಚಿತವಾಗಿದೆ. ಆದರೆ ಅದು ಚಿರತೆ ಎಂದು ಹೇಳುವಂತಿಲ್ಲ. ಸಾಮಾನ್ಯವಾಗಿ ಚಿರತೆಗಳು ಪ್ರಾಣಿಗಳನ್ನು ಎಳೆದೊಯ್ದು ಅವುಗಳ ಕತ್ತು ಮತ್ತು ಹೊಟ್ಟೆಯನ್ನು ಹರಿದು ತಿನ್ನುತ್ತವೆ. ಆದರೆ ಇಲ್ಲಿ ಕತ್ತಿಗೆ ಮತ್ತು ಹಿಂಭಾಗದ ಮಾಂಸ ಪರಚಲಾಗಿದೆ. ಪಶು ವೈದ್ಯರು ಮೃತಪಟ್ಟ ಹಸುವಿನ ಪರೀಕ್ಷೆ ನಡೆಸಿದ್ದಾರೆ. ವೈದ್ಯರ ವರದಿ ಬಂದ ನಂತರವೇ ಅದು ಯಾವ ಪ್ರಾಣಿಗೆ ಬಲಿಯಾಗಿದೆ ಎಂಬುದು ಖಾತ್ರಿಯಾಗಲಿದೆ.”
-ವಿಜಯಕುಮಾರ ಬಡಿಗೇರ. ಅರಣ್ಯಾಧಿಕಾರಿ ಚಿತ್ತಾಪುರ.