ಚೆನ್ನೈ: ದಳಪತಿ ವಿಜಯ್ ಅವರ ‘ಲಿಯೋ’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆ ಮೂಲಕ ಲೋಕೇಶ್ ಕನಕರಾಜ್ – ವಿಜಯ್ ಅವರಿಗೆ ‘ಮಾಸ್ಟರ್’ ಬಳಿಕ ಮತ್ತೊಂದು ಹಿಟ್ ತಂದುಕೊಟ್ಟಿದೆ.
ಭಾರತದಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ವರ್ಲ್ಡ್ ವೈಡ್ 500 ಕೋಟಿಯತ್ತ ದಾಪುಗಾಲಿಟ್ಟಿದೆ. ವಿಜಯ್ ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಯಶಸ್ಸಾದ ಬೆನ್ನಲ್ಲೇ ಅಭಿಮಾನಿಗಳಿಗಾಗಿ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮ ನಡೆಸಲು ಯೋಜನೆ ಹಾಕಿಕೊಂಡಿದೆ. ಇತ್ತೀಚೆಗೆ ನಿರ್ದೇಶಕ ಲೋಕೇಶ್ ಅವರು ಈ ಬಗ್ಗೆ ಹೇಳಿದ್ದರು. ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡಿದ್ದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಅಪಾರ ಜನ ಸೇರುವುದರಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.
ಇದೀಗ ಸಿನಿಮಾದ ಸಕ್ಸಸ್ ಮೀಟ್ ನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದು,ಈ ಕುರಿತು ಪೊಲೀಸರ ಬಳಿ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಅನುಮತಿ ಕೇಳಿದೆ ಎನ್ನಲಾಗಿದೆ.
ಈ ಕುರಿತು ಪೊಲೀಸರು ಮಾರಾಟವಾಗುವ ಟಿಕೆಟ್ ಹಾಗೂ ಜನರ ಸಂಖ್ಯೆಯ ಬಗ್ಗೆ ನಿರ್ಮಾಣ ಸಂಸ್ಥೆಯ ಬಳಿ ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ. ನ. 1 ರಂದು ಕಾರ್ಯಕ್ರಮವನ್ನು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿಯನ್ನು ಕೇಳಲಾಗಿದೆ ಎಂದು ವರದಿ ತಿಳಿಸಿದೆ.
ವಿಜಯ್, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಮಿಸ್ಕಿನ್, ಸ್ಯಾಂಡಿ ಮತ್ತು ಗೌತಮ್ ಮೆನನ್ ,ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.