ದೇವನಹಳ್ಳಿ: ದಿನ ನಿತ್ಯ ಬಳಕೆ ಮಾಡುವ ತೈಲ ಉತ್ಪನ್ನಗಳು, ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯ ಮಧ್ಯೆ ಮಾರುಕಟ್ಟೆಯಲ್ಲಿ ತರಕಾರಿ ಬೆಳೆಗಳೂ ಏರುತ್ತಿದ್ದು, ನಿಂಬೆಹಣ್ಣಿನ ಬೆಲೆಗಗನಕ್ಕೇರಿದೆ.
ಒಂದು ನಿಂಬೆಹಣ್ಣಿಗೆ 10ರೂ.ನಿಂದ 12ರೂ.ಗೆ ಕೊಟ್ಟು ಗ್ರಾಹಕರು ಖರೀದಿ ಮಾಡುವಂತೆ ಆಗಿದೆ. ಜಿಲ್ಲೆಯಾದ್ಯಂತ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಅಧಿಕವಾಗಿರುವುದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ದಪ್ಪ ನಿಂಬೆಹಣ್ಣು 15ರೂ.ಗೆ ಒಂದು, ಸಣ್ಣ ನಿಂಬೆಹಣ್ಣು ಇದ್ದರೆ 20ರೂ.ಗೆ 3 ನೀಡಲಾಗುತ್ತಿದೆ. ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ಇತ್ತೀಚೆಗೆ ತರಕಾರಿಗಳಿಗೆ ಬೆಲೆ ಏರಿಳಿತವಾಗುತ್ತಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿರು ಬಿಸಿಲಿಗೆ ಒಂದಿಷ್ಟು ನಿಂಬೆರಸದ ಜ್ಯೂಸ್ ಮಾಡಿಕೊಂಡು ಸೇವನೆ ಮಾಡಲೂ ಸಹ ತಡಕಾಡುವಂತೆ ಆಗಿದೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಾಮಿನ್-ಸಿ ಅನ್ನು ಯಥೇಚ್ಛ ವಾಗಿ ಹೊಂದಿದೆ. ಇದರ ವೈಜ್ಞಾನಿಕವಾಗಿ ಸಿಟ್ರಸ್ ಆರಂಟಿಫೋಲಿಯ ಎಂತಲೂ ಕರೆಯುತ್ತಾರೆ.
ಬಳಕೆ ಅಧಿಕ: ಆಂದ್ರಪದೇಶ ಮತ್ತು ಬೆಂಗಳೂರು ಸಿಟಿ ಮಾರುಕಟ್ಟೆ ಇತರೆ ಕಡೆಗಳಿಂದ ನಿಂಬೆಹಣ್ಣನ್ನು ಖರೀದಿಸಿಕೊಂಡು ಬಂದು ವ್ಯಾಪಾರ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುಂದ್ಯಾವರು, ಜಾತ್ರಾ ಮಹೋತ್ಸವ, ಹುಟ್ಟುಕೂದಲು, ಭೀಗರ ಔತಣಕೂಟ ಸೇರಿದಂತೆ ಮಾಂಸಾಹಾರದ ಜೊತೆ ನಿಂಬೆಹಣ್ಣನ್ನು ಕತ್ತರಿಸಿ ನೀಡುತ್ತಾರೆ. ಪಾನಕ ಮಾಡುವ ವೇಳೆಯಲ್ಲೂ ಸಹ ನಿಂಬೆಹಣ್ಣನ್ನು ಬಳಸುತ್ತಾರೆ. ಸ್ವಿಂಗಲ್ ಎಂಬಾತನ ಪ್ರಕಾರ ನಿಂಬೆ ಉಷ್ಣವಲಯದ ದೇಶಗಳಲ್ಲಿ ಬೆಳೆಯುತ್ತಾರೆ. ಇದು ಮೂಲತಃ ಏಷ್ಯಾದಿಂದ ಪರಿಚಯಿಸಲಾಗಿದ್ದು, ಪೂರ್ವ ಏಷ್ಯಾದ ದ್ವೀಪಸಮೂಹಗಳ ಮೂಲ ನಿವಾಸಿಯೆಂದು ಏಷ್ಯಾದ ಮುಖ್ಯ ಭೂಭಾಗಕ್ಕೆ ಕೊಂಡೊಯ್ಯಲಾಗಿತ್ತೆಂದು ಹೇಳುತ್ತಾರೆ. ಆದ್ರೆ ಕೆಲವರು ಉತ್ತರ ಭಾರತದಲ್ಲಿ ಕಾಡು ಗಿಡವಾಗಿ ಬೆಳೆಯುತ್ತಿರುವುದಾಗಿ ಇದರ ತವರು ಭಾರತವೆಂದು ಅಭಿಪ್ರಾಯಪಡುತ್ತಾರೆ.
ಹಲವು ಉಪಯೋಗ: ನಿಂಬೆಯನ್ನು ಅದರ ತಾಜಾ ಹಣ್ಣಿಗಾಗಿ ಬೆಳೆಸುವುದೇ ವಾಡಿಕೆ. ಇದರ ರಸದಿಂದ ಶರಬತ್ತು ತಯಾರಿಸುವುದಲ್ಲದೆ ಮಾರ್ಮಲೆಂಡ್, ಕಾರ್ಡಿಯಲ್ ಮುಂತಾದವನ್ನೂ ತಯಾರಿಸುವರು. ನಿಂಬೆಯ ರಸವನ್ನು ಭಟ್ಟಿಯಿಳಿಸಿ ತೈಲವನ್ನು ತೆಗೆಯುವುದಿದೆ. ಸಿಪ್ಪೆಯಿಂದಲೂ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಪಾನೀಯಗಳಿಗೆ ವಾಸನೆ ಕಟ್ಟಲೂ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಬಳಸುವುದಿದೆ. ತಂಪುಪಾನೀಯ, ಅಡಿಗೆಗೆ ನಿಂಬೆಹಣ್ಣನ್ನು ಹೇರಳವಾಗಿ ಬಳಸುತ್ತಾರೆ.
ನಿಂಬೆಹಣ್ಣು ಬೆಳೆಯುವ ದೇಶಗಳು: ಪ್ರಮುಖವಾಗಿ ಚೀನಾ, ಮೆಕ್ಸಿಕೋ, ಭಾರತ, ಬ್ರಜೀಲ್, ಅರ್ಜೆಂಟೈನಾ, ಯುಎಸ್, ಟರ್ಕಿ, ಸ್ಪೇನ್, ಇರಾನ್ ಮತ್ತು ಇಟಲಿ ದೇಶಗಳಲ್ಲಿ ಅತೀ ಹೆಚ್ಚು ನಿಂಬೆಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ.
ನಿಂಬೆಹಣ್ಣು ಸರಿಯಾದ ರೀತಿ ಸರಬರಾಜು ಆಗುತ್ತಿಲ್ಲ. ಮಾರುಕಟ್ಟೆಯಿಂದ ನಿಂಬೆಹಣ್ಣನ್ನು ಖರೀದಿಸಿಕೊಂಡು ವ್ಯಾಪಾರ ಮಾಡುವಂತಾಗಿದೆ. ನಿಂಬೆಹಣ್ಣು ವ್ಯಾಪಾರವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ನಿಲ್ಲಿಸಬಾರದು ಎಂಬ ಕಾರಣಕ್ಕಾಗಿ ಮಾರಾಟ ಮಾಡುತ್ತಿದ್ದೇವೆ.
– ಮುರುಗೇಶ್, ನಿಂಬೆಹಣ್ಣಿನ ವ್ಯಾಪಾರಿ
ಬೇಸಿಗೆಯಲ್ಲಿ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚು ಇರುತ್ತದೆ. ನಿಂಬೆಹಣ್ಣು ಚಿತ್ರಾನ್ನಕ್ಕೆ ಹಾಕಿದರೆ ರುಚಿ ಬರುತ್ತದೆ. ಬೆಲೆ ಹೆಚ್ಚಾದರೂ ನಿಂಬೆಹಣ್ಣನ್ನು ಬಳಸಲೇ ಬೇಕಾಗುತ್ತದೆ. ಎಲ್ಲ ವಸ್ತುಗಳಿಗೂ ಪ್ರತಿನಿತ್ಯ ಬೆಲೆಗಳು ಹೆಚ್ಚಾಗುತ್ತಿದೆ.
– ಮಂಜುಳಾ, ಗೃಹಿಣಿ
– ಎಸ್.ಮಹೇಶ್