ವಿಜಯಪುರ : ರೈತರು ಕೋವಿಡ್ ಸೋಂಕು ಹರಡುವಿಕೆ ತಡೆಯಲು ಮಾಸ್ಕ್ ಧರಸುವುದು ಸೇರಿದಂತೆ ಅಗತ್ಯ ಇರುವ ಮುನ್ನೆಚ್ಚರಿಕೆ ವಹಿಸಬೇಕು. ಅನಿರೀಕ್ಷಿತವಾಗಿ ಎದುರಾಗಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ರೈತರು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ರೈತರಿಗೆ ಸಲಹೆ ನೀಡಿದ್ದಾರೆ.
ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತರಕಾರಿ, ಹಣ್ಣು ವಿಭಾಗದ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ತರಕಾರಿ, ಹಣ್ಣು ಸೇರಿ ತೋಟಗಾರಿಕೆ ಬೆಳೆಯುವ ರೈತರಾದ ಬೊಮ್ಮನಜೋಗಿ ಗ್ರಾಮದ ವಿಠ್ಠಲ ಯಂಕಂಚಿ, ಗೌಡಪ್ಪಗೌಡ ಬಿರಾದಾರ, ರುದ್ರಪ್ಪ ಜೋಗೂರ ಸೇರಿದಂತೆ ಇತರರೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಆಲಿಸಿದರು.
ನಂತರ ಮಾತನಾಡಿದ ಅಶೋಕ ಅಲ್ಲಾಪುರ, ಕೋವಿಡ್ ಎಂಬ ಕೋವಿಡ್ ಸಾಂಕ್ರಾಮಿಕ ಮಾರಕ ರೋಗ ಜಗತ್ತಿಗೆ ವಿಚಿತ್ರ ಪರಿಸ್ಥಿತಿ ತಂದಿಟ್ಟಿದೆ. ಕಳೆದ ಒಂದೂವರೆ ವರ್ಷದಿಂದ ಜಗತ್ತನ್ನು ಬಾಧಿಸುತ್ತಿದ್ದು, ಇದೀಗ ರೂಪಾಂತರಿಯಾಗಿ ಎರಡನೇ ಅಲೆ ಸೃಷ್ಟಿಸಿದೆ. ಈ ಪರಿಸ್ಥಿತಿ ನಿರ್ವಹಿಸುವಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕೇಂದ್ರ- ರಾಜ್ಯ ಬಿಜೆಪಿ ಸರ್ಕಾರಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ. ರೈತರು ಕೂಡ ಸರ್ಕಾರದೊಂದಿಗೆ ಕೈಜೋಡಿಸಿ ಕೋವಿಡ್ ನಿರ್ಮೂಲನೆಗೆ ಸಹಕರಿಸಿ ಎಂದು ಮನವರಿಕೆ ಮಾಡಿದರು.
ಕೋವಿಡ್ ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಲಿಂಬೆ ಬೆಳೆಗಾರರಿಗೆ ಲಿಂಬೆಯ ಪ್ರಮುಖ ಮಾರುಕಟ್ಟೆಗಳಾದ ಮುಂಬೈ, ಸೋಲಾಪುರ, ಪುಣೆ ಮಹಾನಗರಗಳಿಗೆ ಲಿಂಬೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ವೇಗವಾಗಿದ್ದು, ಎರಡನೇ ಅಲೆಯ ಕಾರಣ ಅಲ್ಲಿನ ಮಾರುಕಟ್ಟೆಗಳಲ್ಲಿ ಕೂಡ ವಹಿವಾಟು ಇಲ್ಲವಾಗಿದೆ. ಈ ಹಂತದಲ್ಲಿ ಜಿಲ್ಲೆಯ ಕಣಜ ವಿಜಯಪುರ ಜಿಲ್ಲೆಯ ಲಿಂಬೆ ಬೆಳೆಗಾರರೂ ಸಮಸ್ಯೆಗೆ ಸಿಲುಕಿದ್ದು, ಪರ್ಯಾಯ ವ್ಯವಸ್ಥೆಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಲಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, ವಿಜಯಪುರ ಎಪಿಎಂಸಿ ಅಧ್ಯಕ್ಷ, ಶೇಖರ ಗೊಳಸಂಗಿ, ಕಾರ್ಯದರ್ಶಿ ಕೆ.ಎನ್.ನಾಗೇಶ, ಧನರಾಜ ಪಟ್ಟಣಶೆಟ್ಟಿ ಇತರರು ಉಪಸ್ಥಿರಿದ್ದರು.