Advertisement

ಮಹಿಳೆಯ ಸರ ಸುಲಿಗೆ ಪ್ರಕರಣ:ಆರೋಪಿ ಸೆರೆ

03:45 AM Jan 06, 2017 | Harsha Rao |

ಮಂಗಳೂರು: ಬಿಕರ್ನಕಟ್ಟೆ ಜಯಶ್ರೀ ಗೇಟ್‌ ಬಳಿ ಒಂಭತ್ತು ತಿಂಗಳ ಹಿಂದೆ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ  ಮಂಗಳೂರು ಸಿಸಿಬಿ ಪೊಲೀಸರು ಆರೋಪಿ ಕಾರ್ಕಳ ತಾಲೂಕು ಇರ್ವತ್ತೂರಿನ ಜೀವನ್‌ ಪೂಜಾರಿಯನ್ನು ಬಂಧಿಸಿ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಪ್ರಕರಣದ ವಿವರ
2016 ಮಾರ್ಚ್‌ 29 ರಂದು ಬಿಕರ್ನಕಟ್ಟೆಯ ಪೂರ್ಣಿಮಾ ಮತ್ತು ಅವರ ಅಜ್ಜಿ ಅಪ್ಪಿ ಹಾಗೂ ಮನೆಯವರು ಆಡುಮರೋಳಿ ದೇವಸ್ಥಾನಕ್ಕೆ ಹೋಗಿ ವಾಪಾಸು ಬಿಕರ್ನಕಟ್ಟೆ ಜಯಶ್ರೀ ಗೇಟ್‌ ಕಡೆಗೆ ರಾತ್ರಿ 9 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ಅಪರಿಚಿತ ಯುವಕ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಚಾಲನೆ ಸ್ಥಿತಿಯಲ್ಲಿಟ್ಟು  ಅಪ್ಪಿ  ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದನು. ಈ ಬಗ್ಗೆ ಪೂರ್ಣಿಮಾ ಅ‌ವರು ನೀಡಿದ ದೂರಿನಂತೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

9 ತಿಂಗಳ ಬಳಿಕ ಅಂದರೆ 2017 ಜನವರಿ 4 ರಂದು ಮದ್ಯಾಹ್ನ ಮಂಗಳೂರು ನಗರದ ಹಳೆ ಬಸ್‌ ನಿಲ್ದಾಣದ ಪರಿಸರದಲ್ಲಿ ಓರ್ವ ವ್ಯಕ್ತಿಯು ಬಿಳಿ ಹಾಗೂ ನೀಲಿ ಬಣ್ಣದ ಯಮಹಾ ಎಫ್‌ಝಡ್‌ ಬೈಕ್‌ ನಲ್ಲಿ ಚಿನ್ನದ ಸರವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಬಂದಂತೆ ಸಿಸಿಬಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಕಾರ್ಕಳ ತಾಲೂಕು ಇರ್ವತ್ತೂರಿನ ಭೈರಬೆಟ್ಟು ಮನೆಯ ಜೀವನ್‌ ಪೂಜಾರಿ ಯಾನೆ ಜೀವನ್‌ ಪಿಂಟ್‌ (33)ನನ್ನು ವಶಕ್ಕೆ ಪಡೆದು ಕೊಂಡರು. ವಿಚಾರಣೆ ನಡೆಸಿದಾಗ ಆತನ ಬಳಿ 18 ಗ್ರಾಂ ತೂಕದ 58,000 ರೂ. ಮೌಲ್ಯದ ಚಿನ್ನದ ಸರ ಮತ್ತು ಒಂದು ಮೊಬೈಲ್‌ ಫೋನ್‌ ಪತ್ತೆಯಾಯಿತು. ಆತ ಚಲಾಯಿಸುತ್ತಿದ್ದ ಯಮಹಾ ಬೈಕ್‌ ಮತ್ತು ಇನ್ನೊಂದು ಹೊಂಡಾ ಅಕ್ಟಿವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳು ಕೂಡಾ ಕಳವು ಮಾಡಿದ್ದಾಗಿವೆ. 

ಮಾರಾಟಕ್ಕೆ ಯತ್ನ
ಈ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ಈ ಹಿಂದೆ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಪ್ರಸ್ತುತ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್‌ ರಫೀಕ್‌ ಎಂಬಾತ ತನ್ನ ಸಹಚರರ ಮೂಲಕ ಸುಲಿಗೆ ಹಾಗೂ ಕಳವು ಮಾಡಿಸಿ ಮಾರಾಟ ಮಾಡಲು ಈತನಿಗೆ ನೀಡಿದ್ದನು. 

ಆರೋಪಿ ಜೀವನ್‌ ಪೂಜಾರಿ ವಿರುದ್ಧ ಈ ಹಿಂದೆ, ಕಾರ್ಕಳ ನಗರ, ಮೂಡಬಿದಿರೆ, ಬಜಪೆ, ಉಳ್ಳಾಲ, ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 16 ಪ್ರಕರಣ ದಾಖಲಾಗಿವೆ. ಈತನು 4 ತಿಂಗಳ ಹಿಂದೆ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.

Advertisement
Advertisement

Udayavani is now on Telegram. Click here to join our channel and stay updated with the latest news.

Next