Advertisement

ಶಾಸಕಾಂಗಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವ ಅವಶ್ಯಕತೆ ಇದೆ: ಸ್ಪೀಕರ್ ಕಾಗೇರಿ

07:21 PM Nov 21, 2021 | Team Udayavani |

ಬೆಂಗಳೂರು: ಲೋಕಸಭೆಯಲ್ಲಿ ಇರುವಂತೆಯೇ ರಾಜ್ಯದಲ್ಲೂ ಶಾಸಕಾಂಗಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವ ಅವಶ್ಯಕತೆ ಇದ್ದು, ಈ ಕುರಿತು ಈಚೆಗೆ ನಡೆದ ಸಿಮ್ಲಾದ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ತೀರ್ಮಾನವಾಗಿದೆ. ಅದರಂತೆ ರಾಜ್ಯದಲ್ಲಿ ಶೀಘ್ರ ಇದು ಅನುಷ್ಠಾನಕ್ಕೆ ಬರಲಿದೆ’ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

“ನಮ್ಮದು ಸಂವಿಧಾನ ಬದ್ಧ ಜವಾಬ್ದಾರಿಯುತ ಸ್ಥಾನ. ಆದರೆ, ಬಜೆಟ್‌ ಮರುಹೊಂದಾಣಿಕೆಯಿಂದ ಹಿಡಿದು ಪ್ರತಿಯೊಂದಕ್ಕೂ ಉಳಿದವರಂತೆ ದಿನಬೆಳಗಾದರೆ ಆರ್ಥಿಕ ಇಲಾಖೆ ಮುಂದೆ ಪ್ರಸ್ತಾವನೆ ತೆಗೆದುಕೊಂಡು ಹೋಗಲು ಬರುವುದಿಲ್ಲ. ಆದ್ದರಿಂದ ಆರ್ಥಿಕ ಸ್ವಾಯತ್ತತೆಯ ಅವಶ್ಯಕತೆ ಇದೆ.

ಲೋಕಸಭೆಯಲ್ಲಿ ಈಗಾಗಲೇ ಇದೆ. ಅದೇ ರೀತಿ, ಎಲ್ಲ ರಾಜ್ಯಗಳಲ್ಲೂ ಇದನ್ನು ಜಾರಿಗೊಳಿಸುವ ಬಗ್ಗೆ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಬಂಧ ಪೀಠಾಸೀನ ಅಧಿಕಾರಿಗಳ ಸಮಿತಿ ರಚಿಸಲು ಉದ್ದೇಶಿಸಲಾಗಿದೆ. ಜತೆಗೆ ಕರ್ನಾಟಕ ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳು, ಹಣಕಾಸಿನ ಸಚಿವರು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ, ಖುದ್ದು ಲೋಕಸಭಾಧ್ಯಕ್ಷರು ಕೂಡ ಎಲ್ಲ ಮುಖ್ಯಮಂತ್ರಿಗಳ ಜತೆ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಹೀಗೆ ಆರ್ಥಿಕ ಸ್ವಾಯತ್ತತೆ ನೀಡುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ಒಂದು ಹೆಜ್ಜೆ ಮುಂದಿದೆ. ಈ ಸಾಲಿಗೆ ಶೀಘ್ರ ಕರ್ನಾಟಕವೂ ಸೇರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಹೊಸ ಶಾಸಕರಿಗೆ ತರಬೇತಿ
ಹೊಸದಾಗಿ ವಿಧಾನಸಭೆಗಳಿಗೆ ಆಯ್ಕೆಯಾಗುವ ಶಾಸಕರಿಗೆ ಕಡ್ಡಾಯವಾಗಿ ಸಾಮರ್ಥ್ಯವರ್ಧನೆ ದೃಷ್ಟಿಯಿಂದ ತರಬೇತಿ ನೀಡಲಾಗುವುದು. ಇದಕ್ಕೆ ಲೋಕಸಭೆ ಸಂಪೂರ್ಣ ಸಹಕಾರ ನೀಡಲಿದ್ದು, ಇದಕ್ಕೆ ಪೂರಕವಾಗಿ ರಾಜ್ಯವು ತನ್ನ ಯೋಜನೆ ಮತ್ತು ಯೋಚನೆ ತಕ್ಕಂತೆ ಮಾಡಬೇಕು. ಸಾಮರ್ಥಯವರ್ಧನೆ ಜತೆಗೆ ವ್ಯವಸ್ಥೆ ಬಗ್ಗೆ ಸ್ಪಷ್ಟ ಕಲ್ಪನೆಯಾಗದ ಹೊರತು, ಹೊಸ ಶಾಸಕರು ಪರಿಣಾಮಕಾರಿಯಾಗಿ ಸದನದ ಚಟುವಟಿಕೆಗಳನ್ನು ನಡೆಸಲು ಆಗದು. ಇದನ್ನು ಮನಗಂಡು ಹೊಸದಾಗಿ ಆಯ್ಕೆಯಾದ ತಕ್ಷಣ ತರಬೇತಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಇದನ್ನೂ ಓದಿ:ಶ್ವಾನದ ಹೆಸರಲ್ಲಿದೆ 3 ಸಾವಿರ ಕೋಟಿ ರೂ. ಬಂಗಲೆ

ಇನ್ನು ವರ್ಷಕ್ಕೊಮ್ಮೆ ನಡೆಯುತ್ತಿರುವ ಪೀಠಾಸೀನ ಅಧಿಕಾರಿಗಳ ಸಮ್ಮೇಳನವು ಇನ್ಮುಂದೆ ವರ್ಷದಲ್ಲಿ ಎರಡು ಬಾರಿ ಜರುಗಲಿದೆ. ಇದರಲ್ಲಿ ಒಂದು ದೆಹಲಿಯಲ್ಲಿ ಮತ್ತೂಂದು ಬೇರೆ ರಾಜ್ಯಗಳಲ್ಲಿ ಏರ್ಪಡಿಸಲಾಗುವುದು. ಅಲ್ಲದೆ, ಅತ್ಯುತ್ತಮ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರ ಭಾಷಣಗಳು ಹಾಗೂ ಪ್ರಶ್ನೋತ್ತರ ವೇಳೆ ಸದನದಲ್ಲಿ ಯಾವುದೇ ಗದ್ದಲ, ಗೊಂದಲ ಉಂಟಾಗದಂತೆ ಆಯಾ ರಾಜ್ಯಗಳಲ್ಲಿ ಸರ್ವಪಕ್ಷಗಳ ಜತೆ ಚರ್ಚಿಸಿ, ನಿರ್ಣಯ ಕೈಗೊಳ್ಳಬೇಕು ಎಂದು ನೂರನೇ ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ನ. 13ರಿಂದ 24ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ. ಈ ಸಂಬಂಧ ಸಿದ್ಧತೆಗಳು ನಡೆದಿವೆ ಎಂದ ಅವರು, ನ. 26 ಸಂವಿಧಾನ ಅಂಗೀಕರಿಸಿದ ದಿನವಾಗಿದ್ದು, ಆ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುವುದು ಎಂದರು.

“ಪ್ರಮಾಣವಚನವು ಸಂದರ್ಭವು ರಾಜಕೀಯ ಅನಿವಾರ್ಯತೆಗಳಿಗೆ ಬಳಸಿಕೊಳ್ಳುವ ವೇದಿಕೆ ಆಗಬಾರದು. ಇದೆಲ್ಲವನ್ನೂ ಶಾಸಕರ ತರಬೇತಿ ಶಿಬಿರದಲ್ಲಿ ತಿಳಿಸಲಾಗುವುದು’ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚ್ಯವಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ತಡವಾಗಿ ಬರಬಾರದು ಎನ್ನುವುದು ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ಹೊಸ ಶಾಸಕರಿಗೆ ನೀಡಲಾಗುವುದು. ಅಷ್ಟಕ್ಕೂ ಅವರಿಗೂ ಗೊತ್ತಿರುತ್ತದೆ. ಆದರೆ, ರಾಜಕೀಯ ಅನಿವಾರ್ಯತೆಗಳು ಕೂಡ ಅವರಿಗೆ (ಶಾಸಕರಿಗೆ) ಇರುತ್ತವೆ. ಅದೇನೇ ಇರಲಿ, ಪ್ರಮಾಣವಚನವು ರಾಜಕೀಯ ಅನಿವಾರ್ಯತೆಗೆ ಬಳಸಿಕೊಳ್ಳುವ ವೇದಿಕೆ ಆಗಬಾರದು. ಅದಕ್ಕಿರುವ ಗಾಂಭೀರ್ಯತೆ, ಮಹತ್ವವನ್ನು ಉಳಿಸಿಕೊಳ್ಳಬೇಕು. ವೈಯಕ್ತಿಕವಾಗಿ ಭೇಟಿಯಾದಾಗಲೂ ಇದನ್ನು ನಾನು ಅವರಿಗೆ (ಶ್ರೀನಿವಾಸ ಮಾನೆಗೆ) ಹೇಳಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next