Advertisement
ಎರಡು ವಾರಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನ ಹಲವು ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಜತೆಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಬೆಳಗಾವಿಯದು ಈ ಸಲದ ಮೊದಲ ಅಧಿವೇಶನ. ಅದೇ ರೀತಿ ವಿಪಕ್ಷ ನಾಯಕರಾಗಿರುವ ಆರ್. ಅಶೋಕ್ ಅವರಿಗೂ ಹೊಸ ಜವಾಬ್ದಾರಿ ದೊರೆತ ಬಳಿಕ ಇದು ಮೊದಲ ಅಧಿವೇಶನ. ಸರಕಾರಕ್ಕೆ ಒಂದು ರೀತಿ ಪ್ರತಿಷ್ಠೆಯಾಗಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ವಿಪಕ್ಷಕ್ಕೆ ಸರಕಾರದ ವಿರುದ್ಧ ಹೋರಾಡುವ ದೊಡ್ಡ ಸವಾಲು ಇದೆ.
ಬರಗಾಲ, ಕಾವೇರಿ ಜಲ ವಿವಾದ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸ್ಥಗಿತ, ವರ್ಗಾವಣೆ ದಂಧೆ, ಭ್ರಷ್ಟಾಚಾರ (ಗುತ್ತಿಗೆ ದಾರರಿಂದ ಕಮಿಷನ್ ವಸೂಲಿ ಆರೋಪ), ಕಾನೂನು ಮತ್ತು ಸುವ್ಯವಸ್ಥೆ, ಎನ್‌ಇಪಿ-ಎಸ್‌ಇಪಿ ವಿವಾದ ಹಾಗೂ ಸ್ಪೀಕರ್ ಕುರಿತು ಸಚಿವ ಜಮೀರ್ ನೀಡಿದ ಹೇಳಿಕೆ, ವಿಶೇಷವಾಗಿ ಡಿಸಿಎಂ ಡಿಕೆಶಿ ವಿರುದ್ಧದ ಸಿಬಿಐ ಪ್ರಕರಣವನ್ನು ಹಿಂತೆಗೆದುಕೊಂಡ ಸಚಿವ ಸಂಪುಟದ ನಿರ್ಣಯ, ಆಡಳಿತ ಪಕ್ಷಕ್ಕೆ ಸೇರಿದ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಬರೆದಿರುವ ಪತ್ರಗಳು ವಿಪಕ್ಷಗಳ ಹೋರಾಟಕ್ಕೆ ಕೆಲವು ಅಸ್ತ್ರಗಳು.
Related Articles
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಕೇವಲ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ. ಅಧಿವೇಶನದಲ್ಲಿ ಈ ಸಂಬಂಧ ಕಿವಿ ಹಿಂಡುವ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ವರ್ಗಾವಣೆ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ತಮಿಳುನಾಡಿನ ಮಿತ್ರ ಸ್ಟಾಲಿನ್‌ಗೆ ಸಹಾಯ ಮಾಡಲು ಕಾವೇರಿ ವಿಚಾರದಲ್ಲಿ ಕರ್ನಾಟಕದ ಜನರಿಗೆ ಈ ಸರಕಾರ ಮೋಸ ಮಾಡಿದೆ. ಇಂತಹ ಅನೇಕ ವಿಷಯಗಳಲ್ಲಿ ಬಿಜೆಪಿಯ 66 ಶಾಸಕರು ಹಾಗೂ ಜೆಡಿಎಸ್‌ನ 19 ಶಾಸಕರು ಒಂದಾಗಿ ಹೋರಾಟ ಕೈಗೊಳ್ಳುತ್ತೇವೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದ ಸಂವಿಧಾನವಿರೋಧಿ ಕ್ರಮದ ಕುರಿತು ಪ್ರಶ್ನಿಸುತ್ತೇವೆ ಎಂದರು.
Advertisement
ಎಂ.ಎನ್. ಗುರುಮೂರ್ತಿ