ಸುವರ್ಣಸೌಧ: ವಿಧಾನಪರಿಷತ್ ಸದಸ್ಯರಿಗೆ 25 ಕೋಟಿ ರೂ.ಗಳ ವಿಶೇಷ ಅಭಿವೃದ್ಧಿ ಅನುದಾನ ನೀಡಬೇಕೆಂದು ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಒತ್ತಾಯಿಸಿದರು.
ಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಡಿ.30ರೊಳಗಾಗಿ ಅನುದಾನವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕೆಂದು ಹೇಳಿದರು.
ಒಟ್ಟು 75 ವಿಧಾನಪರಿಷತ್ ಸದಸ್ಯರಲ್ಲಿ 58 ಸದಸ್ಯರು ಸಹಿ ಹಾಕಿದ್ದು, ವಿಧಾನಸಭೆ ಸದಸ್ಯರಿಗೆ ನೀಡಿದ ಮಾದರಿಯಲ್ಲಿ ನಮಗೂ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡಲಾಗಿದ್ದು, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಸದಸ್ಯರಿಗೆ ಮೂರು ಜಿಲ್ಲೆಗಳ ವ್ಯಾಪ್ತಿ ಬರುತ್ತಿದೆ. ಕ್ಷೇತ್ರದ ಜನರು ನಮಗೂ ಅಭಿವೃದ್ಧಿ ಕಾರ್ಯಗಳಿಗೆ ಮನವಿ ಮಾಡುತ್ತಿದ್ದಾರೆ. ನಮಗೂ ಅನುದಾನ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗೆ ಧಾರಾಳವಾಗಿ ಹಣ ನೀಡುತ್ತಿದ್ದಾರೆ. ನನ್ನ 38 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ಹಣ ನೀಡುತ್ತಿರುವುದು ಮೊದಲ ಬಾರಿಗೆ ನೋಡುತ್ತಿದ್ದೇನೆ. ಪರಿಷತ್ತು ಸದಸ್ಯರಿಗೂ 25 ಕೋಟಿ ರೂ. ನೀಡಿದರೆ ಶಾಲಾ ಕಟ್ಟಡ ಇನ್ನಿತರ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಇದಕ್ಕೆ ಧ್ವನಿಗೂಡಿಸಿ ಬಹುತೇಕ ಸದಸ್ಯರ ಭಾವನೆ ಇದೆ ಆಗಿದ್ದು, ಮುಖ್ಯಮಂತ್ರಿ ಅವರ ಸಮಯ ಪಡೆದ ಸದನದ ವಿಪಕ್ಷ ನಾಯಕರು, ಪ್ರಮುಖ ಸದಸ್ಯರ ಸಭೆ ನಡೆಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸಭಾನಾಯಕ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಿಳಿಸಿದರು.