Advertisement

ಮೇಲ್ಮನೆಯಲ್ಲೂ ಆಡಿಯೋ ಪ್ರತಿಧ್ವನಿ

12:30 AM Feb 12, 2019 | Team Udayavani |

ಬೆಂಗಳೂರು: ವಿಧಾನ ಪರಿಷತ್ತಿನಲ್ಲೂ ಸೋಮವಾರ ‘ಆಡಿಯೊ ಬಾಂಬ್‌’ ಪ್ರಕರಣ ಪ್ರತಿಧ್ವನಿಸಿ ಈ ಸಂಬಂಧ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಆಡಳಿತ ಪಕ್ಷದ ನಾಯಕರು ಬಾವಿಗಿಳಿದ ಪ್ರಸಂಗ ನಡೆಯಿತು. ಈ ವರ್ತನೆಯನ್ನು ಖಂಡಿಸಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಪರಿಣಾಮ ಅರ್ಧದಿನದ ಕಲಾಪ ಬಲಿಯಾಯಿತು.

Advertisement

ಕಲಾಪ ಆರಂಭವಾಗುತ್ತಿದ್ದಂತೆ ಸದಸ್ಯ ಐವಾನ್‌ ಡಿಸೋಜ, ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಈ ಸಂಬಂಧದ ಆಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿನ ಧ್ವನಿ ತಮ್ಮದೇ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಹಾಗೂ ಪ್ರಕರಣದ ತನಿಖೆಗೆ ಸೂಚಿಸಬೇಕೆಂದು ಆಗ್ರಹಿಸಿದರು.

ಆಡಳಿತ ಪಕ್ಷದ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ‘ಸ್ವತಃ ಆಡಳಿತ ಪಕ್ಷವೇ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದೆ. ತನಿಖೆಗೆ ಆದೇಶ ಮಾಡಬೇಕಾದವರೇ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇದು ಯಾವ ನಿಯಮದಲ್ಲಿದೆ? ಸರ್ಕಾರಕ್ಕೆ ತನಿಖೆಗೆ ಸೂಚಿಸುವ ಯೋಗ್ಯತೆಯೇ ಇಲ್ಲ’ ಎಂದು ಟೀಕಿಸಿದರು. ಸದಸ್ಯರಾದ ಆಯನೂರು ಮಂಜುನಾಥ್‌, ತೇಜಸ್ವಿನಿಗೌಡ, ಅರುಣ್‌ ಶಹಪುರ ಇತರರು ದನಿಗೂಡಿಸಿದರು.

ಆಗ ಆಡಳಿತ ಪಕ್ಷದ ನಾಯಕಿ ಜಯಮಾಲಾ, ‘ಸ್ಪೀಕರ್‌ಗೆ ಲಂಚದ ಆಮಿಷ ಒಡ್ಡಿದ ಯಡಿಯೂರಪ್ಪ ಅವರನ್ನು ಬಂಧಿಸಿ’, ‘ಬಿಜೆಪಿಗೆ ಇಷ್ಟು ಹಣ ಎಲ್ಲಿಂದ ಬಂತು?’, ‘ಮೋದಿ-ಅಮಿತ್‌ ಶಾ ಜೋಡಿ ಕರ್ನಾಟಕ ಜನತಂತ್ರ ನಾಶ’ ಎಂದು ಫ‌ಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ವಾಸ್ತವಾಂಶ ಹೊರಬರಬೇಕಾದರೆ, ಪ್ರಕರಣ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಾವಿಗಿಳಿದರು. ಆಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮನವೊಲಿಕೆ ಪ್ರಯತ್ನ ವಿಫ‌ಲವಾಗಿದ್ದರಿಂದ ಐದು ನಿಮಿಷ ಕಲಾಪ ಮುಂದೂಡಿದರು.

ನೋಟಿಸ್‌ ಕೊಟ್ಟಿದ್ದೀರಾ?: ಮತ್ತೆ ಕಲಾಪ ಆರಂಭಗೊಂಡ ನಂತರವೂ ಇದು ಪುನರಾವರ್ತನೆಗೊಂಡಿತು. ಈ ವೇಳೆ ತುಸು ಖಾರವಾಗಿ ಮಾತನಾಡಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ‘ಈ ಬಗ್ಗೆ ಮೊದಲೇ ನೋಟಿಸ್‌ ಕೊಟ್ಟಿದ್ದೀರಾ? ಇಚ್ಛೆ ಬಂದಂತೆ ಇಲ್ಲಿ ಮಾಡಲಿಕ್ಕೆ ಆಗುವುದಿಲ್ಲ’ ಎಂದು ಪ್ರಶ್ನೋತ್ತರಕ್ಕೆ ಅವಕಾಶ ನೀಡಲು ಮುಂದಾದರು. ಪುನಃ ವಾಗ್ವಾದಗಳಿಂದಾಗಿ ಕಲಾಪ ಒಂದು ತಾಸು ಮುಂದೂಡಲಾಯಿತು.

Advertisement

ನಂತರ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಚರ್ಚೆಗೆ ಅವಕಾಶ ಕೋರಿ ಮತ್ತೆ ಬಾವಿಗಿಳಿದಾಗ, ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ‘ಶೇಮ್‌… ಶೇಮ್‌…’ ಎನ್ನುತ್ತಾ ಸಭೆಯಿಂದ ಹೊರನಡೆದರು. ಈ ಮಧ್ಯೆ ಸಚಿವೆ ಜಯಮಾಲಾ, ಇದು ಮೇಲ್ಮನೆ ಇತಿಹಾಸಕ್ಕೆ ಕಪ್ಪುಚುಕ್ಕೆ ಆಗಲಿದೆ ಎಂದು ಬಾವಿಗಿಳಿದ ಸದಸ್ಯರ ಮನವೊಲಿಕೆಗೆ ಪ್ರಯತ್ನಿಸಿದರು.

ಚರ್ಚೆಗೆ ಕೈ-ದಳ ಸದಸ್ಯರ ಪಟ್ಟು
ಮೇಲ್ಮನೆಯಲ್ಲಿ ಮಾತನಾಡಿದ ಸದಸ್ಯ ಸಿ.ಎಂ. ಇಬ್ರಾಹಿಂ, ‘ಆಡಿಯೋ ಪ್ರಕರಣದಿಂದ ಬಿಜೆಪಿ ಸದಸ್ಯರು ಶೆಟ್ಟರ ಕಿರಾಣಿ ಅಂಗಡಿಯಲ್ಲಿ ಸಿಲುಕಿದ ಹೆಗ್ಗಣದಂತಾಗಿದ್ದಾರೆ. ಹೊರಗೆ ಬರಲಿಕ್ಕೂ ಆಗುತ್ತಿಲ್ಲ; ಒಳಗೆ ಹೋಗಲಿಕ್ಕೂ ಆಗುತ್ತಿಲ್ಲ. ಹಾಗಾಗಿ, ಸಭಾತ್ಯಾಗ ಮಾಡಿದ್ದಾರೆ. ಅದೇನೇ ಇರಲಿ, ಪ್ರಕರಣದಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಅವಮಾನವಾಗಿದೆ. ಆದ್ದರಿಂದ ನೋಟಿಸ್‌ ನೀಡದಿದ್ದರೂ ಸುಮೊಟೊ ಮೂಲಕ ಸಭಾಪತಿಗಳು ಚರ್ಚೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಜಯಮಾಲಾ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಘಾಸಿಯಾಗಿದೆ. ಸುದೀರ್ಘ‌ ಚರ್ಚೆ ಆಗಲೇಬೇಕು. ಪೀಠಕ್ಕೆ ಅಗೌರವ ತೋರಲಾಗಿದ್ದು, ತಪ್ಪು ಮಾಡಿದವರೇ ಒಪ್ಪಿಕೊಂಡಿರುವುದರಿಂದ ಪ್ರತಿಯೊಬ್ಬ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಬೇಕು ಎಂದರು. ಬಸವರಾಜ ಹೊರಟ್ಟಿ ಮಾತನಾಡಿ, ಇದು ವಿಧಾನ ಮಂಡಲದ ಪ್ರತಿಷ್ಠೆಯ ಪ್ರಶ್ನೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಪ್ರಸಾರ ಆಗುತ್ತಿದೆ. ಈ ಘಟನೆಯಿಂದ ಜನಪ್ರತಿನಿಧಿಗಳೆಲ್ಲರನ್ನೂ ಹಳದಿಕಣ್ಣುಗಳಿಂದ ನೋಡುವಂತಾಗಿದೆ. ಶಾಸಕರ ಗೌರವವನ್ನು ಎತ್ತಿಹಿಡಿಯುವುದು ಸದನದ ಕರ್ತವ್ಯ ಎಂದು ಅಭಿಪ್ರಾ ಯಪಟ್ಟರು. ಅಂತಿಮವಾಗಿ ಸಭಾಪತಿಗಳು, ನೋಟಿಸ್‌ ಕೊಡಿ. ಈ ಬಗ್ಗೆ ಪರಿಶೀಲಿಸಿ ಅವಕಾಶ ನೀಡುವುದಾಗಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next