ಬೆಂಗಳೂರು: ಆಯುಷ್ ಇಲಾಖೆಯಲ್ಲಿ 96 ಜನ ವೈದ್ಯರು ತಜ್ಞರಾಗಿಲ್ಲದಿದ್ದರೂ ಪ್ರತೀ ತಿಂಗಳು ತಜ್ಞ ವೈದ್ಯರು ಪಡೆಯುವ ಸಂಭಾವನೆಯನ್ನೇ ಎಣಿಸುತ್ತಿದ್ದಾರೆ. ಅದೂ ಹಲವಾರು ವರ್ಷಗಳಿಂದ ಈ ಸಂಭಾವನೆಯನ್ನು ಸರಕಾರ ಪಾವತಿಸುತ್ತಿದೆ!
– ಇದನ್ನು ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬಹಿರಂಗಪಡಿಸಿದರು.
ಸೋಮವಾರ ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಪಿ.ಎಚ್. ಪೂಜಾರ್ ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ವೈದ್ಯರು ಮತ್ತು ಜವಾಬ್ದಾರಿ ರೂಪಿಸದೆ ಹೆಚ್ಚುವರಿ ಸ್ನಾತಕೋತ್ತರ ಭತ್ತೆ ಪಡೆಯುತ್ತಿರುವ ವೈದ್ಯರ ಬಗ್ಗೆ ವಿವರ ಕೇಳಿದರು. ಆಗ ಸಚಿವರು ಈ ಅಂಶ ತಿಳಿಸಿದರು.
ಇದಕ್ಕೂ ಮುನ್ನ ಪಿ.ಎಚ್. ಪೂಜಾರ್, ಆಯುಷ್ ಇಲಾಖೆಯಲ್ಲಿ ಮಸಾಜ್ ಮಾಡಿದವರನ್ನು ಒಳರೋಗಿಗಳು ಅಂತ ಪರಿಗಣಿಸಿ, ಚಿಕಿತ್ಸೆ ಕೊಟ್ಟಿರುವ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ವೆಚ್ಚ ತೋರಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಸಚಿವ ದಿನೇಶ್ ಹೇಳಿದರು.