Advertisement

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

02:37 AM Nov 27, 2021 | Team Udayavani |

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಮತ್ತು ಜಿದ್ದಾಜಿದ್ದಿನ ಕಣ ವಾಗಿರುವ ವಿಧಾನಪರಿಷತ್‌ ಚುನಾವಣೆ ಅಖಾಡದ ಸ್ಪಷ್ಟ ಚಿತ್ರಣ ಈಗ ಲಭ್ಯವಾಗಿದೆ.

Advertisement

ಬೆಳಗಾವಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಲಖನ್‌ ಜಾರಕಿಹೊಳಿ, ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಹಾವೇರಿ, ವಿಜಯಪುರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಮಲ್ಲಿಕಾರ್ಜುನ ಲೋಣಿ ಕಣ ದಲ್ಲೇ ಉಳಿದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಲೆನೋವಾಗಿದೆ. ಲಖನ್‌ ಮತ್ತು ಮಲ್ಲಿಕಾರ್ಜುನ ನಾಮಪತ್ರ ವಾಪಸಾತಿಗೆ ಮುಖ್ಯಮಂತ್ರಿ ಸಹಿತ ಬಿಜೆಪಿ ನಾಯಕರು ಕೊನೇ ಕ್ಷಣದವರೆಗೂ ಪ್ರಯತ್ನಿಸಿದರೂ ಫ‌ಲ ನೀಡಲಿಲ್ಲ.

ವಿಜಯಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಲೋಣಿ ಅವರ ಮನವೊಲಿಕೆಗೆ ಸ್ವತಃ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಯತ್ನಿಸಿದರೂ ಅವರು ಮಣಿಯಲಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಈ ಕ್ಷೇತ್ರವೂ ತಲೆನೋವಾಗಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ದ್ವಿಸದಸ್ಯ ಕ್ಷೇತ್ರಗಳಲ್ಲಿ ತಲಾ ಒಂದೊಂದು ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಜಾಣ ನಡೆ ಅನುಸರಿಸಿದ್ದವಾದರೂ ಈಗ ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಯ ಲಕ್ಷಣಗಳು ಕಂಡುಬರುತ್ತಿರುವುದು ಯಾರಿಗೆ ಮುಳುವಾಗು ವುದೋ ಎಂಬ ಆತಂಕ ಮೂಡಿಸಿದೆ.

20 ಕ್ಷೇತ್ರಗಳ 25 ಸ್ಥಾನಗಳಿಗೆ ಕಾಂಗ್ರೆಸ್‌, ಬಿಜೆಪಿ ಸ್ಪರ್ಧಿಸಿದ್ದು, ಜೆಡಿಎಸ್‌ ಅಂತಿಮ ವಾಗಿ ಆರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಕೊಡಗು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್‌ ಅಭ್ಯರ್ಥಿ ಎಚ್‌.ಯು. ಇಸಾಖ್‌ ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್‌ ಪಡೆದಿರುವುದು ಕುತೂಹಲ ಮೂಡಿಸಿದೆ.

Advertisement

ಇದನ್ನೂ ಓದಿ:ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ

ಕಣದಿಂದ ಹಿಂದಕ್ಕೆ
ನಾಮಪತ್ರ ವಾಪಸಾತಿಗೆ ಕಡೆಯ ದಿನವಾಗಿದ್ದ ಶುಕ್ರವಾರ 20 ಮಂದಿ ಕಣ ದಿಂದ ಹಿಂದೆ ಸರಿದಿದ್ದಾರೆ. ಈಗ ಒಟ್ಟು 91 ಅಭ್ಯರ್ಥಿಗಳು ಕಣದಲ್ಲಿ ಉಳಿ ದಿದ್ದು, ಮೂರೂ ಪಕ್ಷಗಳು ಸಮರಕ್ಕೆ ಸಜ್ಜುಗೊಂಡಂತಾಗಿದೆ.

ಎಲ್ಲೆಲ್ಲಿ ಪೈಪೋಟಿ?
ದಕ್ಷಿಣ ಕನ್ನಡ, ಮೈಸೂರು, ವಿಜಯಪುರ ದ್ವಿಸದಸ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಒಬ್ಬ ಅಭ್ಯರ್ಥಿಯನ್ನು ಕಣ ಕ್ಕಿಳಿಸಿರುವುದರಿಂದ ಎರಡೂ ಪಕ್ಷಗಳಿಗೆ ಅಂಥ ಸಮಸ್ಯೆ ಇಲ್ಲ. ಉಳಿದಂತೆ ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿದೆ. ಬೆಳಗಾವಿ ಮತ್ತು ಧಾರವಾಡದಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಪಕ್ಷೇತರರ ನಡುವೆ ಪೈಪೋಟಿ ಏರ್ಪಟ್ಟಿದೆ.

ಶಿವಮೊಗ್ಗ, ಬೀದರ್‌, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಕಲಬುರಗಿ, ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಜೆಡಿಎಸ್‌ ಸ್ಪರ್ಧಿಸದಿರುವ ಹಾಗೂ ಆ ಪಕ್ಷದ ಬೆಂಬಲಿಗ ಸದಸ್ಯರಿರುವ ಬೆಳಗಾವಿ, ಧಾರವಾಡ, ವಿಜಯಪುರ, ರಾಯಚೂರು, ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಬೆಂಬಲ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ.

ಬೆಳಗಾವಿಯಲ್ಲಿ ಮಹಾಂತೇಶ ಕವಟಗಿಮಠ ಬಿಜೆಪಿ ಅಧಿಕೃತ ಅಭ್ಯರ್ಥಿ. ಅವರಿಗೆ ತೊಂದರೆ ಆಗಬಾರದೆಂದು ನಾಮಪತ್ರ ವಾಪಸ್‌ ಪಡೆಯುವಂತೆ ಲಖನ್‌ ಜಾರಕಿಹೊಳಿ ಜತೆ ಮಾತುಕತೆ ನಡೆಸಲಾಗಿತ್ತು. ಸಾಧ್ಯವಾದ ಕಡೆಯಲ್ಲಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಕಾಂಗ್ರೆಸ್‌, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯವಾಗಿ ತೊಂದರೆ ಅನುಭವಿಸಿದ್ದೇನೆ. ಅಂತಹ ತಪ್ಪು ಮತ್ತೆ ಮಾಡಲು ಹೋಗುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನ ನಡವಳಿಕೆ ನೋಡಿಕೊಂಡು ಬೆಂಬಲ ನೀಡುವ ಬಗ್ಗೆ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು.
– ಎಚ್‌.ಡಿ. ಕುಮಾರಸ್ವಾಮಿ,
ಜೆಡಿಎಸ್‌ ರಾಜ್ಯಾಧ್ಯಕ್ಷ

ಪರಿಷತ್‌ ಚುನಾವಣೆ
ಯಲ್ಲಿ 20 ಸ್ಥಾನಗಳ ಪೈಕಿ 15ರಲ್ಲಿ ನಾವು ಗೆಲ್ಲುತ್ತೇವೆ. ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ ಪಕ್ಷದ ವಿರುದ್ಧವಾಗಿ ಹೋಗಿಲ್ಲ, ಲಖನ್‌ ಸ್ಪರ್ಧೆ ಮಾಡಿದ್ದು ಅವರ ರಾಜಕೀಯ ತಂತ್ರ. ಅವರು ಕಾಂಗ್ರೆಸ್‌ ಮತವನ್ನು ಪಡೆದು ಸ್ವಂತ ಶಕ್ತಿಯ ಮೇಲೆ ಗೆದ್ದು ಬರಲಿದ್ದಾರೆ.
-ಗೋವಿಂದ ಕಾರಜೋಳ,ಸಚಿವ

Advertisement

Udayavani is now on Telegram. Click here to join our channel and stay updated with the latest news.

Next