Advertisement

ವಿಧಾನಸಭೆ ಉಪಸಭಾಪತಿ, ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶ

07:20 AM Oct 23, 2022 | Team Udayavani |

ಬೆಳಗಾವಿ: ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ‌ ಚಂದ್ರಶೇಖರ ಮಾಮನಿ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ ಕೊನೆಯುಸಿರೆಳೆದರು.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಅನಂದ ಮಾಮನಿ ಅವರು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಅನೇಕ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.  ರವಿವಾರ ಪಾರ್ಥಿವ ಶರೀರ ತವರು ಜಿಲ್ಲೆಗೆ ಆಗಮಿಸಲಿದೆ.‌

ಶಾಸಕ ಆನಂದ ಮಾಮನಿ ನಿಧನದಿಂದ ಜಿಲ್ಲೆಯಾದ್ಯಂತ ಶೋಕ ಮಡುಗಟ್ಟಿದ್ದು, ಹಿರಿಯ ರಾಜಕೀಯ ನೇತಾರನನ್ನು ಕಳೆದುಕೊಂಡು ಜಿಲ್ಲೆ ಬಡವಾಗಿದೆ. ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು ಆದಾಗ ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಈ ಬಗ್ಗೆ ಸುದ್ದಿ ಹರಿದಾಡಿದಾಗ, ಸ್ವತಃ ಆನಂದ‌ ಮಾಮನಿ ವಿಡಿಯೋ ಮಾಡಿ, ಆರೋಗ್ಯವಾಗಿ ಇರುವುದಾಗಿ ಹೇಳಿಕೆ ನೀಡಿದ್ದರು. ನಂತರ ಇವರನ್ನು ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ 2008, 2013 ಹಾಗೂ 2018ರಲ್ಲಿ ಸತತ ಮೂರು ಬಾರಿ ಭಾರತೀಯ ಜನತಾ ಪಾರ್ಟಿಯಿಂದ ಜಯಶಾಲಿಯಾಗಿದ್ದರು.  ಆನಂದ ಮಾಮನಿ ಅವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಬಹಳಷ್ಟಿದೆ.

ಆನಂದ ಮಾಮನಿ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಗೆದ್ದು ಜನ ಸೇವೆ ಮಾಡಿದ್ದಾರೆ. ಇವರ ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ತಂದೆಯವರು ನಿಭಾಯಿಸಿದ್ದ ಹುದ್ದೆ ಪಡೆದುಕೊಳ್ಳುವಲ್ಲಿ ಆನಂದ ಮಾಮನಿ ಯಶಸ್ವಿಯಾಗಿದ್ದಾರೆ.

Advertisement

ಚಂದ್ರಶೇಖರ ಮಾಮನಿ 1985 ಪಕ್ಷೇತರ ಹಾಗೂ 1994ರಲ್ಲಿ ಜನತಾ ದಳದಿಂದ ಜಯ ಗಳಿಸಿದ್ದರು. ನಂತರ 1999ರಲ್ಲಿ ಗಂಗೂತಾಯಿ ಮಾಮನಿಯವರು  ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. 2004ರಲ್ಲಿ ವಿಶ್ವನಾಥ ಮಾಮನಿ ಆಯ್ಕೆಯಾಗಿದ್ದರು. ನಂತರ 2008, 2013 ಹಾಗೂ 2018ರಲ್ಲಿ ಆನಂದ ಮಾಮನಿ ಸತತವಾಗಿ ಆಯ್ಕೆಯಾಗಿದ್ದಾರೆ.

ಆನಂದ ಮಾಮನಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಹುದ್ದೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ‌ನಂತರ ಇವರನ್ನು ವಿಧಾನಸಭೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಸಚಿವ ಸ್ಥಾನ ಸಿಗದಿದ್ದಾಗ, ಸಚಿವ ಸ್ಥಾನ ಕೇಳಲು ಇದು ಪಕ್ವ ಕಾಲ, ಪಕ್ಷ ನಿಷ್ಠಾವಂತರು ಆಟಕ್ಕುಂಟು ಲೆಕ್ಕಕಿಲ್ಲ. ಇದೇನು ವಿಪರ್ಯಾಸವೋ ಕಟು ಸತ್ಯವೋ? ಇದು ಪಕ್ಷ ನಿಷ್ಠರು ಹಾಗೂ ಮತದಾರರಿಗೆ ಆದ ಘೋರ ಅನ್ಯಾಯ ಎಂದು ಟ್ವಿಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next