Advertisement
ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಮೊದಲಾದವರ ಡ್ಯಾನ್ಸ್ ವೀಡಿಯೋ ಒಂದು ವೈರಲ್ ಆಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಇವರೆಲ್ಲ ವಿಕ್ಕಿ ಕೌಶಲ್ ಅಭಿನಯದ “ತೌಬಾ ತೌಬಾ’ ಹಾಡಿಗೆ ಕುಂಟುತ್ತ ಹೆಜ್ಜೆ ಹಾಕಿದ್ದರು. ಕಳೆದ ಒಂದು ತಿಂಗಳಿಂದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕಾರಣ ವಿಪರೀತ ದಣಿದಿದ್ದೇವೆ ಎಂಬುದನ್ನು ತೋರಿಸಲು ಯತ್ನಿಸಿದ್ದರು.
ಈ ವೀಡಿಯೋ ಭಾರತದ ಪ್ಯಾರಾ ಆ್ಯತ್ಲೀಟ್ ಗಳ ಅಸಮಾಧಾನಕ್ಕೆ ಕಾರಣವಾಗಿದೆ. ಪ್ಯಾರಾ ಸ್ವಿಮ್ಮರ್ ಶಮ್ಸ್ ಆಲಂ, ಬ್ಯಾಡ್ಮಿಂಟನ್ ಆಟಗಾರ್ತಿ ಮಾನ್ಸಿ ಜೋಶಿ ಮೊದಲಾದವರು ತೀವ್ರ ಆಕ್ರೋಶಗೊಂಡು ಪೋಸ್ಟ್ ಮಾಡಿದ್ದಾರೆ. ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. “ಭಾರತದ ಮಾಜಿ ಕ್ರಿಕೆಟಿಗರು ಅಂಗವಿಕಲರನ್ನು ಮುಜುಗರಕ್ಕೀಡು ಮಾಡಿದ್ದಾರೆ. ಸ್ಪರ್ಧೆಯ ಬಳಿಕ ದೇಹ ದಣಿದಿರುತ್ತದೆ ಎಂಬುದನ್ನು ನಾವು ಬಲ್ಲೆವು. ಆದರೆ ನೀವು ಇದನ್ನು ತಿಳಿಯಪಡಿಸಿದ ರೀತಿ ಅಂಗವಿಕಲ ಸಮುದಾಯವನ್ನು ಗೇಲಿ ಮಾಡಿದಂತಿದೆ’ ಎಂದು ಪೋಸ್ಟ್ ಮಾಡಿದ್ದಾರೆ.
Related Articles
ಪ್ಯಾರಾಲಿಂಪಿಕ್ಸ್ ಇಂಡಿಯಾ ಕೂಡ ಇದಕ್ಕೆ ಕಠಿನ ವಾಗಿ ಪ್ರತಿಕ್ರಿಯಿಸಿದೆ. “ಕ್ರಿಕೆಟ್‌ನ ಸ್ಟಾರ್ ಸೆಲೆಬ್ರಿಟಿ ಗಳು ಸಕಾರಾತ್ಮಕ ಭಾವನೆ ಮೂಡಿಸುವ ಅತೀ ಮಹತ್ವದ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಅಂಗವಿಕಲರನ್ನು ಅನುಕರಿಸಿ ಅವರ ದೈಹಿಕ ನ್ಯೂನತೆಗಳನ್ನು ಗೇಲಿ ಮಾಡುವುದು ಸರಿ ಯಲ್ಲ. ನೀವಿದಕ್ಕೆ ಕ್ಷಮೆ ಕೇಳಬೇಕಿದೆ’ ಎಂದಿದೆ.
Advertisement
ಹರ್ಭಜನ್ ಸಮರ್ಥನೆ
ಏತನ್ಮಧ್ಯೆ, ಹರ್ಭಜನ್ ಈ ವೀಡಿಯೋ ಮಾಡಿರುವ ಕುರಿತುಸಮರ್ಥನೆ ನೀಡಿದ್ದಾರೆ. “ನಾವು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಮತ್ತು ಈ ವೀಡಿಯೊ 15 ದಿನಗಳ ಕಾಲ ಕ್ರಿಕೆಟ್ ಆಡಿದ ನಂತರ ನಮ್ಮ ದೇಹವನ್ನು ಪ್ರತಿಬಿಂಬಿಸಲು, ನಾವು ಯಾರನ್ನೂ ಅವಮಾನಿಸಲು ಅಥವಾ ಅಪರಾಧ ಮಾಡಲು ಪ್ರಯತ್ನಿಸುತ್ತಿಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಎಲ್ಲರಿಗೂ ಪ್ರೀತಿಯಿಂದ ಮುಂದುವರಿಯೋಣ” ಎಂದು ಬರೆದಿದ್ದಾರೆ.