Advertisement

Illegal ಕಟ್ಟಡಗಳ ಸಕ್ರಮ: ಭವಿಷ್ಯದಲ್ಲಿ ಕಟ್ಟೆಚ್ಚರ ಅಗತ್ಯ

01:16 AM Aug 19, 2024 | Team Udayavani |

ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆ ಅಥವಾ ಸಂಬಂಧಿತ ಪ್ರಾಧಿಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ನಿರ್ಮಿಸಲಾದ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಕಳೆದ ಹಲವಾರು ವರ್ಷಗಳಿಂದ ಈ ತೆರನಾಗಿ ಯಾವುದೇ ಖಾತೆ ಇಲ್ಲದೆ ಬಡಾವಣೆ ಅಥವಾ ಜಾಗದಲ್ಲಿ ಮನೆ ಅಥವಾ ವಾಣಿಜ್ಯ ಕಟ್ಟಡ ಗಳನ್ನು ನಿರ್ಮಿಸಿಕೊಂಡವರು ಸರಕಾರದ ಈ ನಿರ್ಧಾರದಿಂದ ನಿಟ್ಟುಸಿರು ಬಿಡು ವಂತಾಗಿದೆ. ಆದರೆ ಈ ಅಕ್ರಮ ಸಕ್ರಮದ ನಿರ್ಧಾರವನ್ನು ಪ್ರಕಟಿಸುವ ವೇಳೆ ಸಚಿವರು “ಇದು ಒಂದು ಬಾರಿಗೆ ಮಾತ್ರ ಅನ್ವಯವಾಗಲಿದೆ’ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ನಿರ್ಮಾಣಗಳಿಗೆ ಅವಕಾಶ ಮಾಡಿಕೊಡಲಾಗದು ಎಂದು ಎಚ್ಚರಿಕೆ ನೀಡಿರುವುದು ಉಲ್ಲೇಖಾರ್ಹ.

Advertisement

ನಗರ ಪ್ರದೇಶಗಳಲ್ಲಿನ ಜನರು ತಮ್ಮ ವಶದಲ್ಲಿದ್ದ ಜಾಗ ಅಥವಾ ಬಡಾ ವಣೆಗಳಿಗೆ ಎ-ಖಾತಾ ಅಥವಾ ಬಿ-ಖಾತಾ ಇಲ್ಲದೆಯೇ ಮನೆ ಅಥವಾ ಕಟ್ಟಡ ಗಳನ್ನು ನಿರ್ಮಿಸುವುದು ನಿಯಮಬಾಹಿರವಾಗಿದೆ. ಕಳೆದ ಹಲವಾರು ದಶಕ ಗಳಿಂದಲೂ ಇಂತಹ ನಿರ್ಮಾಣಗಳು ನಡೆಯುತ್ತಲೇ ಬಂದಿದ್ದರೂ ಸ್ಥಳೀಯಾ ಡಳಿತ ಸಂಸ್ಥೆಯಾಗಲಿ, ನಗರಾಭಿವೃದ್ಧಿ ಪ್ರಾಧಿಕಾರವಾಗಲಿ ಸೂಕ್ತ ಕ್ರಮ ಕೈಗೊಂಡಿ ರಲಿಲ್ಲ. ಹೀಗಾಗಿ ಸಹಜವಾಗಿಯೇ ಈ ಅಕ್ರಮ ನಿರ್ಮಾಣಗಳಲ್ಲಿ ಜಾಗದ ಮಾಲಿಕರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಸಮಭಾಗಿಗಳೇ. ಆದರೂ ಖಾತೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಪ್ರಶ್ನೆ ಬಂದಾಗ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ತಕ ರಾರು ತೆಗೆದು ಇವುಗಳನ್ನು ಒದಗಿಸಿಕೊಡಲು ನಿರಾಕರಿಸುತ್ತಲೇ ಬಂದಿವೆ. ಕಳೆದ ಹಲವಾರು ವರ್ಷಗಳಿಂದ ಈ ಸಂಬಂಧ ಇಂತಹ ಅಕ್ರಮ ನಿರ್ಮಾಣಕಾರರು ಬೇಡಿಕೆ ಇಡುತ್ತಲೇ ಬಂದಿದ್ದರೂ ಇತ್ತ ಸರಕಾರ ಗಮನ ಹರಿಸಿರಲಿಲ್ಲ.

ರಾಜ್ಯದ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಅಕ್ರಮ ನಿರ್ಮಾಣಗಳು ಹೆಚ್ಚುತ್ತಲೇ ಸಾಗಿರುವುದರಿಂದ ನಗರಗಳ ಸುವ್ಯವಸ್ಥಿತ ಅಭಿವೃದ್ಧಿಗೆ ಬಲುದೊಡ್ಡ ಸಮಸ್ಯೆ ಎದುರಾಗಿದೆ. ಈ ಕಟ್ಟಡಗಳನ್ನು ಸಕ್ರಮಗೊಳಿಸಿದಲ್ಲಿ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದ್ದುದರಿಂದ ರಾಜ್ಯ ಸರಕಾರ ಈ ಅಕ್ರಮ ಕಟ್ಟಡಗಳ ಮಾಲಕರ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ.ಆದರೆ ಈಗ ಸರಕಾರ ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿನ ಇಂತಹ ಅಕ್ರಮ ಮನೆ, ಕಟ್ಟಡಗಳನ್ನು ಶುಲ್ಕ ಸಹಿತ ಪರವಾನಿಗೆ ನೀಡಿ ಖಾತೆ ಮತ್ತು ಮೂಲಸೌಕರ್ಯಗಳನ್ನು ಒದಗಿಸಿಕೊಡುವ ನಿರ್ಧಾರ ಕೈಗೊಳ್ಳುವ ಮೂಲಕ ಈ ಸಮಸ್ಯೆಗೆ ಅಂತ್ಯ ಹಾಡಲು ನಿರ್ಧರಿಸಿದೆ.

ಆದರೆ ಸರಕಾರ ಹೀಗೆ ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸುವಾಗ ಸಾರ್ವಜನಿಕ ಸಂಚಾರಕ್ಕೆ ಮತ್ತು ನಿರ್ದಿಷ್ಟ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಇಂತಹ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಲ್ಲಿ ಅದನ್ನು ಪರಿಗಣಿಸಬಾರದು. ಅಷ್ಟು ಮಾತ್ರವಲ್ಲದೆ ಸಚಿವರು ಹೇಳಿದಂತೆ ಈ ಅಕ್ರಮ-ಸಕ್ರಮ ವಿನಾಯಿತಿಯನ್ನು ಕೇವಲ ಒಂದು ಬಾರಿಗೆ ಸೀಮಿತಗೊಳಿಸಬೇಕಷ್ಟೇ ವಿನಾ ಮತ್ತೆ ಇಂತಹ ಅಕ್ರಮ ಕಟ್ಟಡಗಳು ತಲೆ ಎತ್ತದಂತೆ ಎಚ್ಚರ ವಹಿಸಬೇಕು. ಇತ್ತ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು ಕಟ್ಟುನಿಟ್ಟಿನ ನಿಗಾ ಇರಿಸಿ, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ತೆರನಾದ ಅಕ್ರಮ ನಿರ್ಮಾಣ ಕಾಮಗಾರಿಗಳು ನಡೆಯದಂತೆ ಮತ್ತು ಕಟ್ಟಡಗಳ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಸಂಬಂಧಿತ ನಿಯಮಾವಳಿ ಪಾಲನೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕೆಲವು ವರ್ಷಗಳ ಬಳಿಕ ಇಂತಹುದೇ ಸಮಸ್ಯೆ ಮತ್ತೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರ ಯಾವುದೇ ಮುಲಾಜಿಲ್ಲದೆ ಭವಿಷ್ಯದಲ್ಲಿ ಅಕ್ರಮ ಮನೆ, ಕಟ್ಟಡಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next