Advertisement

ಪಿಂಚಣಿಗಾಗಿ ಕಾನೂನು ಸಮರಕ್ಕೆ ಅಸ್ತು

12:51 PM Nov 01, 2017 | |

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬರಬೇಕಾಗಿರುವ ಅಂದಾಜು 120 ಕೋಟಿ ರೂ. ಪಿಂಚಣಿ ಬಾಕಿ ಹಣಕ್ಕಾಗಿ ಕೋರ್ಟ್‌ ಮೊರೆ ಹೋಗಲು ಪಾಲಿಕೆ ಸಾಮಾನ್ಯ ಸಭೆ ಒಕ್ಕೊರಲಿನ ತೀರ್ಮಾನ ಕೈಗೊಂಡಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವೀರಣ್ಣ ಸವಡಿ, ಪಾಲಿಕೆ ಆರ್ಥಿಕ ಸ್ಥಿತಿ ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.

Advertisement

ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ಬಿಟ್ಟು, ಪಕ್ಷಭೇದ ಮರೆತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಪಾಲಿಕೆ ರಕ್ಷಣೆಗೆ ನಾವೆಲ್ಲರೂ ಮುಂದಾಗೋಣ.ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂಬುದರ ಬಗ್ಗೆ ಸಭೆಯಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳೋಣ ಎಂದರು.  

ಪಾಲಿಕೆ ವಿಪಕ್ಷ ನಾಯಕ ಸುಭಾಸ ಶಿಂಧೆ ಮಾತನಾಡಿ, ಬೆಳಗಾವಿ ಅಧಿವೇಶನ ವೇಳೆ ಪಾಲಿಕೆ ಎಲ್ಲ ಸದಸ್ಯರು ಸುವರ್ಣಸೌಧ ಬಳಿ ಧರಣಿ ಕೂಡೋಣ ಎಂದರು. ಕಾಂಗ್ರೆಸ್‌ನ ಗಣೇಶ ಟಗರಗುಂಟಿ ಮಾತನಾಡಿ, ಪಕ್ಷಾತೀತ ಹೋರಾಟ ಮಾಡೋಣ. ಜಿಲ್ಲಾ ಉಸ್ತುವಾರಿ ಸಚಿವರನ್ನೊಮ್ಮೆ ಭೇಟಿ ಮಾಡಿ ಮನವಿ ಮಾಡೋಣ ಎಂದರು.

ಬಿಜೆಪಿಯ ಡಾ| ಪಾಂಡುರಂಗ ಪಾಟೀಲ ಮಾತನಾಡಿ, ಪಾಲಿಕೆ   ಮುಖ್ಯಸ್ಥರಾದ ಆಯುಕ್ತರೇ ಪಾಲಿಕೆ ಆರ್ಥಿಕ ದುಸ್ಥಿತಿಯಲ್ಲಿದೆ, ವೇತನ ನೀಡುವುದಕ್ಕೂ ಹಣವಿಲ್ಲ ಎಂದರೆ ಹೇಗೆ. ನಿಧಿಯಾಧಾರಿತ ವ್ಯವಸ್ಥೆ ಉಲ್ಲಂಘನೆ ಹಾಗೂ ಅಸಮರ್ಪಕ ನಿರ್ವಹಣೆಯೇ ಈ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು. 

ಪಿಂಚಣಿ ಬಾಕಿ ಹಣ ವಿಷಯವಾಗಿ ಸರಕಾರಕ್ಕೆ ಸಾಕಷ್ಟು ಮನವಿ ಮಾಡಲಾಗಿದೆ. ಇನ್ನು ಮನವಿ ಮಾಡುವುದು ಸಾಕು. ಪಾಲಿಕೆ ಸದನದಿಂದಲೇ ಕೋರ್ಟ್‌ ಮೊರೆ ಹೋಗೋಣ. ಸರಕಾರದ ಪ್ರಧಾನ ಕಾರ್ಯದರ್ಶಿ, ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆ  ಕಾರ್ಯದರ್ಶಿಗಳನ್ನು ಪಾರ್ಟಿಯನ್ನಾಗಿ ಮಾಡೋಣ. ಮೂರು ತಿಂಗಳಲ್ಲಿ ಹಣ ಬರುತ್ತದೆ ಎಂದರು.

Advertisement

ಜೆಡಿಎಸ್‌ ಧುರೀಣ ಅಲ್ತಾಫ್ ಕಿತ್ತೂರ ಮಾತನಾಡಿ, ಬಾಕಿ ಹಣಕ್ಕಾಗಿ ಕೋರ್ಟ್‌ಗೆ ಹೋಗೋಣ. ಅದೇ ರೀತಿ ಎಲ್ಲ ಸದಸ್ಯರು ಸೇರಿ ಧರಣಿ ಮಾಡುವುದು ಅಗತ್ಯ ಎಂದರು. ಯಾಸೀನ್‌ ಹಾವೇರಿಪೇಟೆ, ಸುಧೀರ ಸರಾಫ್, ಪ್ರಕಾಶ ಕ್ಯಾರಕಟ್ಟಿ, ಶಿವಾನಂದ ಮುತ್ತಣ್ಣವರ ಸೇರಿದಂತೆ ಎಲ್ಲ ಸದಸ್ಯರು ಇದಕ್ಕೆ ಸಹಮತ ಸೂಚಿಸಿದರು. 

ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, 2014ರಿಂದ ಪಾಲಿಕೆ ನಿವೃತ್ತ ನೌಕರರ ಪಿಂಚಣಿ ಹಾಗೂ ಇತರೆ ಸೌಲಭ್ಯಗಳ ರೂಪವಾಗಿ ಸೆಪ್ಟೆಂಬರ್‌ ಕೊನೆವರೆಗೆ 116.21ಕೋಟಿ ಬರಬೇಕಾಗಿದ್ದು, ಅಕ್ಟೋಬರ್‌ ತಿಂಗಳದ್ದು ಸೇರಿ ಒಟ್ಟು 120 ಕೋಟಿ ಬಾಕಿ ಬರಬೇಕಾಗುತ್ತದೆ.

ಸರಕಾರ ಇದೇ ವರ್ಷದ ಜೂನ್‌ನಿಂದ ನಿವೃತ್ತಿ ಹೊಂದಿವರಿಗೆ ಸಣ್ಣ ಉಳಿತಾಯ ಖಾತೆ ಮೂಲಕ ಪಿಂಚಣಿ ನೀಡಲು ಆದೇಶ ಮಾಡಿದೆ. ಅದೇ ರೀತಿ 2,400 ನಿವೃತ್ತ ನೌಕರರಿಗೂ ಸಣ್ಣ ಉಳಿತಾಯದಡಿ ಪಿಂಚಣಿ ನೀಡಲು ಒಪ್ಪಿಗೆ ನೀಡಿದೆ. ಬಾಕಿ ಇರುವ ಸುಮಾರು 120 ಕೋಟಿ ರೂ. ಮರುಹೊಂದಾಣಿಕೆ ಸಾಧ್ಯವಿಲ್ಲವೆಂದು ಹೇಳಿದೆ ಎಂದರು.

ಸದಸ್ಯರ ಅನಿಸಿಕೆಗಳನ್ನು ಆಲಿಸಿದ ನಂತರ ಮಹಾಪೌರರ ಸ್ಥಾನದಲ್ಲಿದ್ದ ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ ಅವರು ಪಿಂಚಣಿ ಬಾಕಿ ಹಣಕ್ಕಾಗಿ ಕೋರ್ಟ್‌ ಮೊರೆ ಹೋಗುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ವಿಷಯದ ಚರ್ಚೆಗೆ ತೆರೆ ಎಳೆದರು.  

Advertisement

Udayavani is now on Telegram. Click here to join our channel and stay updated with the latest news.

Next