Advertisement
ಆಸ್ತಿ ವಿವರ ಸಲ್ಲಿಸದ ಮಹಾನಗರ ಪಾಲಿಕೆ ಮಾಜಿ ಸದಸ್ಯರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅಂಥವರ ವಿರುದ್ಧ ಕಾನೂನು ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರು ನಿರ್ಧರಿಸಿದ್ದಾರೆ. ಶಾಸಕರಿಂದ ಹಿಡಿದು ಪಾಲಿಕೆ ಸದಸ್ಯರವರೆಗೆ ಪ್ರತಿ ಜನ ಪ್ರತಿನಿಧಿಯೂ ಪ್ರತಿವರ್ಷ ಲೋಕಾಯುಕ್ತ ಕಾಯ್ದೆ ಪ್ರಕಾರ, ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ.
ಲೋಕಾಯುಕ್ತ ಕಾಯ್ದೆಗೆ 2010ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ತಿದ್ದುಪಡಿ ಪ್ರಕಾರ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆಗೆ ಚುನಾಯಿತರಾಗುವ ಸದಸ್ಯರು ತಮ್ಮ ಆಸ್ತಿ ಘೋಷಣೆ ಪತ್ರವನ್ನು ಲೋಕಾಯುಕ್ತರ ಮುಂದೆ ಮಂಡಿಸಬೇಕಾಗಿತ್ತು. ಆದರೆ, 9 ವರ್ಷಗಳಿಂದ ಇದು ನಡೆದಿಲ್ಲ. ಈ ಸಂಬಂಧ ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಅವರು ಲೋಕಾಯುಕ್ತಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದ ಕಾರಣ ವಿಚಾರಣೆ ನಡೆಸಿದ ಲೋಕಾಯುಕ್ತರು, ಎಲ್ಲ ಚುನಾಯಿತ ಸದಸ್ಯರು ತಮ್ಮ ಆಸ್ತಿ ಘೋಷಣೆ ಮಾಡುವಂತೆ ಆ. 28ರಿಂದ ಮೂರು ವಾರಗಳ ಗಡುವು ನೀಡಿದ್ದಾರೆ.
Related Articles
Advertisement
ಒಂದು ವೇಳೆ ಪಾಲಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ ಮಾಜಿ ಮನಪಾ ಸದಸ್ಯರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಉಲ್ಲೇಖೀಸಲಾಗಿದೆ.
ಮಾಜಿ ಸದಸ್ಯರೂ ಆಸ್ತಿ ವಿವರ ಸಲ್ಲಿಸಬೇಕು
ಲೋಕಾಯುಕ್ತ ಕಾಯ್ದೆಯ ಪ್ರಕಾರ ಮನಪಾದ ಈ ಹಿಂದಿನ ಸದಸ್ಯರು ಕೂಡ ತಮ್ಮ ಆಸ್ತಿ ಘೋಷಣೆ ಮಾಡಬೇಕಿತ್ತು. ಆದರೆ ಯಾರೂ ಮಾಡಿರಲಿಲ್ಲ. ತತ್‌ಕ್ಷಣವೇ ಅವಧಿ ಮುಗಿದಿರುವ ಸದಸ್ಯರು ನಿಗದಿತ ದಿನದೊಳಗೆ ಆಸ್ತಿ ಘೋಷಣೆ ಮಾಡಬೇಕು. ಇಲ್ಲವಾದರೆ, ಮುಂದಿನ ಚುನಾವಣೆಗೆ ಸ್ಪರ್ಧಿಸುವ ಮಾಜಿ ಕಾರ್ಪೊರೇಟರ್‌ಗಳ ವಿರುದ್ಧ ಲೋಕಾಯುಕ್ತ, ಚುನಾವಣೆ ಆಯೋಗಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.
– ಎಚ್.ಎಂ. ವೆಂಕಟೇಶ್, ಸಾಮಾಜಿಕ ಹೋರಾಟಗಾರರು.
ಆಸ್ತಿ ವಿವರ ಸಲ್ಲಿಸಿ
ಲೋಕಾಯುಕ್ತ ಕಾಯ್ದೆ ಪ್ರಕಾರ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆ ಸದಸ್ಯರು ಆಸ್ತಿ ವಿವರ ಸಲ್ಲಿಸಬೇಕು. ಕಾರ್ಪೊರೇಟರ್‌ಗಳು, ಕೌನ್ಸಿಲರ್‌ಗಳು ಮೂರು ವಾರದೊಳಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕು ಎಂದು ಈಗಾಗಲೇ ಆದೇಶ ನೀಡಲಾಗಿದೆ. ಅವಧಿ ಮುಗಿದಿರುವ ಪಾಲಿಕೆ ಸದಸ್ಯರು ಆಸ್ತಿ ವಿವರ ನೀಡುವ ವಿಚಾರದ ಬಗ್ಗೆ ಪರಿಶೀಲಿಸಲಾಗುವುದು.
– ಪಿ. ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿಗಳು
ದಿನೇಶ್ ಇರಾ