Advertisement

CM Siddaramaiah ಪತ್ನಿಗೆ ಕಾನೂನು ಬದ್ಧವಾಗಿ ಸೈಟ್‌: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

12:05 AM Jul 08, 2024 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 50:50 ಅನುಪಾತದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎನ್ನುತ್ತಿರುವುದಕ್ಕೂ ಸಿದ್ದರಾಮಯ್ಯ ಅವರ ಕುಟುಂಬದವರು ಪಡೆದಿರುವ ನಿವೇಶನಕ್ಕೂ ಸಂಬಂಧವಿಲ್ಲ. ಯಾವುದೇ ದುರುಪಯೋಗ ನಡೆದಿಲ್ಲ. ತಪ್ಪು ಮಾಡಿಲ್ಲ. ರೆಕಾರ್ಡ್‌ಗಳು ಕ್ರಮಬದ್ಧವಾಗಿದೆ. ನಿಯಮವನ್ನೂ ಮೀರಿಲ್ಲ ಎಂದು ಹೇಳಿದರು.

ಕೆಸರೆಯ 464 ಸರ್ವೇ ನಂಬರಿನ 3.16 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ವಶಕ್ಕೆ ಪಡೆದಿರುವುದಕ್ಕೆ ತಪ್ಪೊಪ್ಪಿಕೊಂಡು ಮುಡಾ ಅಧಿಕಾರಿಗಳು ಕೌನ್ಸಿಲ್‌ನಲ್ಲಿ ಚರ್ಚಿಸಿ, ತೀರ್ಮಾನ ಮಾಡಿ ಪರ್ಯಾಯವಾಗಿ ವಿಜಯನಗರದಲ್ಲಿ ನಿವೇಶನ ಕೊಟ್ಟಿದ್ದಾರೆ. ಆದರೆ ಈ ಪ್ರಕರಣದಲ್ಲಿ ರಾಜಕೀಯವಾಗಿ ತಪ್ಪು ಹುಡುಕಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಕಳಂಕ ಮತ್ತು ಭ್ರಷ್ಟಾಚಾರ ರಹಿತವಾಗಿರುವ ಬದ್ಧತೆಯ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಕೆಲವರು ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದು ದಲಿತರ ಭೂಮಿಯಲ್ಲ

ಕೆಸರೆಯಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಖರೀದಿಸಿರುವುದು ದಲಿತರ ಭೂಮಿಯಲ್ಲ. ನಿಂಗ ಬಿನ್‌ ಜವರ ಅವರು ಬಹಿರಂಗ ಹರಾಜಿನಲ್ಲಿ 120 ರೂಪಾಯಿಯನ್ನು ಸರಕಾರಿ ಖಜಾನೆಗೆ ಪಾವತಿಸಿ, 1985ರಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಜಮೀನನ್ನು ಖರೀದಿ ಮಾಡಿದ್ದಾರೆ. ಇದು ಹೇಗೆ ಪಿಟಿಸಿಎಲ್‌ ಜಮೀನು ಆಗುತ್ತದೆ. ಇದರ ಬಗ್ಗೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಆದರೂ ಮಾತನಾಡುತ್ತಿದ್ದಾರೆ. ಈ ಹಿಂದೆ ಇದೆಕ್ಕೆಲ್ಲ ತಲೆನೇ ಕೆಡಿಸಿಕೊಳ್ಳದವರೂ ಈಗ ಮಾತನಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರಿಗೆ ಮಾತಿನ ಮೂಲಕ ತಿವಿದರು. ಮುಡಾದಲ್ಲಿನ ಹಗರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ವರದಿ ಬಂದ ಬಳಿಕ ರಾಜಕಾರಣಿಗಳ ಸಹಿತವಾಗಿ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ಜನಪ್ರತಿನಿಧಿ ನೇಮಕ ರದ್ದತಿಗೆ ಸಿಎಂಗೆ ಮನವಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶಾಸಕರು, ವಿಧಾನ ಪರಿಷತ್‌ ಸದಸ್ಯರ ನೇಮಕವನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿರುವುದಾಗಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಹಿಂದೆ ಮುಡಾದಲ್ಲಿ ಮೂವರು ಮಾತ್ರ ಸದಸ್ಯರಿದ್ದರು. ಅದೇ ಮಾದರಿಯನ್ನು ಮುಂದುವರಿಸುವಂತೆ ಕೋರಿದ್ದೇನೆ. ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತನಿಖಾ ವರದಿ ಬಂದ ಮೇಲೆ ಮುಡಾವನ್ನು ಸರಿಪಡಿಸಲಾಗುವುದು. ಸಿಎಂ ಸಿದ್ದರಾಮಯ್ಯ ಹಾಗೂ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ರುವ ತನಕವೂ ಮೈಸೂರಿನ ಜನರು ಮುಡಾವನ್ನು ಅನುಮಾನದಿಂದ ನೋಡಬಾರದಂತೆ ಮಾಡುತ್ತೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next