Advertisement

ದುಶ್ಚಟ ನಿಯಂತ್ರಣದಿಂದ ಕಾನೂನು ರಕ್ಷಣೆ

12:56 PM Jun 29, 2019 | Suhan S |

ಬೆಳಗಾವಿ: ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಶರೀರದ ಮೇಲೆ ಅನೇಕ ದುಷ್ಪರಿಣಾಮ ಉಂಟಾಗುತ್ತಿವೆ. ಇದನ್ನು ನಿಯಂತ್ರಿಸುವುದರಿಂದ ಸಮುದಾಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯಾಗುತ್ತದೆ ಎಂದು ಪೊಲೀಸ್‌ ಉಪ ಆಯುಕ್ತ ಸೀಮಾ ಲಾಟ್ಕರ್‌ ಹೇಳಿದರು.

Advertisement

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಇಲಾಖೆ, ಪೊಲೀಸ್‌ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಶುಕ್ರವಾರ ಪೊಲೀಸ್‌ ಅಧಿಕಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮ ಕುರಿತು ಜಿಲ್ಲಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನಾಂಗದಲ್ಲಿ ತಂಬಾಕು ಸೇವನೆ ಹೆಚ್ಚಾಗುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆರೋಗ್ಯ ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗುತ್ತಿರುವುದರಿಂದ ದೇಶದ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಆರಕ್ಷಕ ಉಪಾಧೀಕ್ಷಕ ಜಿ.ವೈ.ಗುಡಾಜಿ ಮಾತನಾಡಿ, ದೈನಂದಿನ ಕಾನೂನು ಮತ್ತು ಸುವ್ಯವಸ್ಥೆ ಜೊತೆಗೆ ಕನಿಷ್ಟ 5 ಕೋಟ್ಪಾ ಕಾಯ್ದೆಯ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸಲಹೆ ಮಾಡಿದರು.

ತಂಬಾಕು ಸೇವನೆಯಿಂದ ಸಮುದಾಯದಲ್ಲಿ ಕ್ಯಾನ್ಸರ್‌, ರಕ್ತದೊತ್ತಡದಿಂದ ಹೃದಯದ ಕಾಯಿಲೆ, ಪಾರ್ಶ್ವವಾಯು ಮುಂತಾದ ಮಾರಕ ರೋಗಗಳು ಹೆಚ್ಚಾಗುತ್ತಿದೆ. ಆದ್ದರಿಂದ ಜನರಲ್ಲಿ ಈ ಕುರಿತು ಅರಿವು ಮೂಡಿಸುವುದರ ಜೊತೆಗೆ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

Advertisement

ಆರ್‌.ಎಲ್.ಲಾ ಕಾಲೇಜನ ನಿವೃತ್ತ ಪ್ರಾಂಶುಪಾಲ ಪ್ರೊ| ಡಿ.ವೈ. ಕುಲಕರ್ಣಿ ಮಾತನಾಡಿ, ಕೋಟ್ಪಾ ಕಾಯ್ದೆ-2003 ರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಕಾನೂನು ಉಲ್ಲಂಘಿಸಿದ ವ್ಯಕ್ತಿಗೆ 200 ರೂ. ದಂಡ, ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇಧ, ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರಿಗೆ ಮಾರುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯ ಎಂದರು.

ಜೆ.ಎನ್‌. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಯೋಗೇಶಕುಮಾರ, ಜಿಲ್ಲಾ ಅಂಕಿತ ಅಧಿಕಾರಿ ಡಾ| ಎಂ.ಎಸ್‌. ಪಲ್ಲೇದ, ಬಿಮ್ಸ್‌ ಸಂಸ್ಥೆಯ ನಿರ್ದೇಶಕ ಡಾ| ಎಸ್‌.ಟಿ. ಕಳಸದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ| ಬಿ.ಎನ್‌ ತುಕ್ಕಾರ ಉಪಸ್ಥಿತರಿದ್ದರು. ಡಾ| ಶ್ವೇತಾ ಪಾಟೀಲ ಸ್ವಾಗತಿಸಿದರು. ಕವಿತಾ ರಾಜನ್ನವರ ವಂದಿಸಿದರು. ಎಂ.ಬಿ. ಸಂಗೊಳ್ಳಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next