ಬಂಟ್ವಾಳ : ಕಾನೂನು ಸಾಕ್ಷರತ ರಥದ ಮೂಲಕ ಗ್ರಾಮಾಂತರದ ಜನ ಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಜನರಿಗೆ ತಿಳಿವಳಿಕೆ ನೀಡಲು ಅವರ ಬಳಿ ತೆರಳು ವುದು ಅವಶ್ಯ. ಇಂತಹ ಕಾರ್ಯ ಮಾಡಲು ಸಂಘಟನೆ ಗಳು ಮುಂದಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಮುಹಮ್ಮದ್ ಇಮ್ತಿಯಾಝ್ ಅಹ್ಮದ್ ಹೇಳಿದರು.
ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ಮಾ. 26ರಂದು ಕಾನೂನು ಸಾಕ್ಷರತ ರಥ ಮತ್ತು ಸಂಚಾರಿ ನ್ಯಾಯಾಲಯಕ್ಕೆ ಚಾಲನೆ ನೀಡಿ, ಮಾ. 29ರ ವರೆಗೆ ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಿಡಿಒ, ಸಿಡಿಪಿಒ, ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಾಗಿದ್ದು, ಉದ್ದೇಶ ಯಶಸ್ವಿಗೊಳಿಸಬೇಕಾಗಿದೆ ಎಂದರು. ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾ.ಪಂ., ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಜರಗಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಹಾಗೂ ಸಿಡಿಪಿಒ ಹಿರಿಯ ಮೇಲ್ವಿಚಾರಕಿ ಉಷಾ ಕುಮಾರಿ ಎಂ. ಮಾತನಾಡಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆಯರಾದ ಪ್ರತಿಭಾ ಡಿ.ಎಸ್., ಶಿಲ್ಪಾ ಜಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ರಮೇಶ್ ಉಪಾಧ್ಯಾಯ ಉಪಸ್ಥಿತರಿದ್ದರು. ನ್ಯಾಯವಾದಿ ನರೇಂದ್ರ ಭಂಡಾರಿ ಪ್ರಸ್ತಾವಿಸಿ, ಸ್ವಾಗತಿಸಿದರು. ನ್ಯಾಯವಾದಿ ಶೈಲಜಾ ರಾಜೇಶ್ ವಂದಿಸಿದರು.
ಕಾನೂನಿನ ದುರುಪಯೋಗ ಸಲ್ಲದು
ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ಯಾನೆಲ್ ನ್ಯಾಯವಾದಿ ಆಶಾಮಣಿ ಮಹಿಳಾ ದೌರ್ಜನ್ಯ ಕಾಯ್ದೆ ಬಗ್ಗೆ ಮಾತನಾಡಿ, ಮಹಿಳೆಯರಿಗೆ ರಕ್ಷಣೆ, ಮಾನಸಿಕ ವಾಗಿ ಧೈರ್ಯ ತುಂಬಲು 2006ರಲ್ಲಿ ಈ ಕಾನೂನು ಜಾರಿಗೆ ತರಲಾಯಿತು. ಮಹಿಳೆಗೆ ಪುರುಷ ಸಮಾಜದಿಂದ ಮಾತ್ರ ದೌರ್ಜನ್ಯ ನಡೆಯುತ್ತಿಲ್ಲ, ಮಹಿಳೆಯರಿಂದಲೂ ದೌರ್ಜನ್ಯವಾಗುತ್ತಿವೆ ಎಂದರು. ದಾಂಪತ್ಯದಲ್ಲಿ ಕಲಹಗಳು ಬಂದಾಗ ಅದನ್ನು ಕೋರ್ಟ್ ಕಟಕಟೆಗೆ ತಾರದೇ ಕುಟುಂಬಸ್ಥ ರೊಂದಿಗೆ ಚರ್ಚಿಸಿ, ಧನ್ಯಾತ್ಮಕ ಪರಿಹಾರ ಕಂಡುಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆ, ಕ್ಷುಲ್ಲಕ ಕಾರಣಕ್ಕೆ ದೂರು ನೀಡಿ ಕಾನೂನನ್ನು ದುರುಪಯೋಗ ಮಾಡುವುದು ಸರಿಯಲ್ಲ. ನಿಜವಾಗಿ ದೌರ್ಜನ್ಯ ಎಸಗಿದರೆ ಮಾತ್ರ ದೂರು ನೀಡಬೇಕು. ಇಂತಹ ಸನ್ನಿವೇಶಗಳಲ್ಲಿ ನ್ಯಾಯಾಧೀಶರು ಸಂತ್ರಸ್ತ ಮಹಿಳೆಗೆ ನಾಯ ಒದಗಿಬೇಕಾಗಿದೆ, ಬಾಕಿಯಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡಬೇಕಾಗಿದೆ ಎಂದರು.