Advertisement

ತಲಾಕ್‌ ನಿಷೇಧಕ್ಕೆ ಕಾನೂನು ಬಲ 

12:34 PM Dec 16, 2017 | Team Udayavani |

ಅತ್ತ ವಿದ್ಯೆಯೂ ಇಲ್ಲದೆ ಇತ್ತ ಆರ್ಥಿಕ ಆಸರೆಯೂ ಇಲ್ಲದೆ ತಲಾಕ್‌ ಸುಳಿಗೆ ಸಿಲುಕಿ ಅತಂತ್ರರಾಗುತ್ತಿದ್ದ ಸಾವಿರಾರು ಮಹಿಳೆಯರ ಪಾಲಿಗೆ ಈ ಶಾಸನ ಆಪತಾºಧವನಾಗಿ ಒದಗಿಬಂದರೆ ಸಾಕು.

Advertisement

ಮುಸ್ಲಿಂ ಸಮುದಾಯದಲ್ಲಿರುವ ಮೂರು ಸಲ ತಲಾಕ್‌ ಹೇಳಿ ವಿವಾಹ ಬಂಧನ ಮುರಿಯುವ ಅನಿಷ್ಟ ಪದ್ಧತಿಯನ್ನು ನಿಷೇಧಿಸುವ ಸಲುವಾಗಿ ರಚಿಸಿದ ಕರಡು ಮಸೂದೆಗೆ ಸಂಪುಟದ ಅನುಮೋದನೆ ದೊರಕಿದೆ. ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ಸಂರಕ್ಷಣಾ ಕಾಯಿದೆ ಎಂದು ಹೆಸರಿಸಲಾಗಿರುವ ಈ ಮಸೂದೆಯಿನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾಗಿ ಮಂಜೂರಾದ ಬಳಿಕ ರಾಷ್ಟ್ರಪತಿ ಅಂಕಿತ ಬಿದ್ದು ಶಾಸನ ರೂಪದಲ್ಲಿ ಜಾರಿಗೆ ಬರಲಿದೆ. ಆಡಳಿತ ಪಕ್ಷ ಎರಡೂ ಸದನಗಳಲ್ಲಿ ಸಂಖ್ಯಾಬಲ ಹೊಂದಿರುವುದರಿಂದ ಮಸೂದೆ ಮಂಜೂರಾತಿ ಕಷ್ಟವಾಗಲಾರದು. ಕಳೆದ ಆಗಸ್ಟ್‌ 22ರಂದು ಸುಪ್ರೀಂ ಕೋರ್ಟಿನ ಪಂಚ ಸದಸ್ಯ ಪೀಠ ತ್ರಿವಳಿ ತಲಾಕ್‌ ನಿಷೇಧಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಶತಮಾನಗಳಿಂದ ಮುಸ್ಲಿಂ ಮಹಿಳೆಯರಿಗಾಗುತ್ತಿರುವ ಅನ್ಯಾಯ ಅಂದಿಗೆ ಕೊನೆಗೊಂಡಿತು ಎಂದು ಭಾವಿಸ ಲಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ತ್ರಿವಳಿ ತಲಾಕ್‌ ನಿರಂಕುಶ ಮತ್ತು ಸಂವಿಧಾನ ಬಾಹಿರ ಎಂದು ತೀರ್ಪು ನೀಡಿದ ಬಳಿಕವೂ ಹಲವು ತಲಾಕ್‌ ಪ್ರಕರಣಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸರಕಾರ ಕಾನೂನು ರಚಿಸಲು ಮುಂದಾಗಬೇಕಾಯಿತು. ಈ ವರ್ಷವೊಂದರಲ್ಲೇ ಸುಪ್ರೀಂ ಕೋರ್ಟಿನ ತೀರ್ಪು ಹೊರಬೀಳುವ ಮೊದಲು 177 ತಲಾಕ್‌ ಪ್ರಕರಣಗಳು ವರದಿಯಾಗಿದ್ದವು. ಅನಂತರ ಸುಮಾರು 80 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಅತಿ ಹೆಚ್ಚು ತಲಾಕ್‌ ಪ್ರಕರಣಗಳಿರುವುದು ಉತ್ತರ ಪ್ರದೇಶದಲ್ಲಿ. ತೀರ್ಪಿನ ಮೊದಲು 9 ತಿಂಗಳಲ್ಲಿ ಆಗಿರುವ ತಲಾಕ್‌ಗಳ ಸಂಖ್ಯೆಗೆ ಹೋಲಿಸಿದರೆ ಅನಂತರದ ಎರಡು ತಿಂಗಳಲ್ಲಿ ಆಗಿರುವ ತಲಾಕ್‌ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತುರ್ತಾಗಿ ಕಾನೂನು ರಚಿಸುವ ಅನಿವಾರ್ಯತೆ ಉಂಟಾಯಿತು. ಅಲ್ಲದೆ ಈ ತೀರ್ಪು ನೀಡಿದಾಗಲೇ ನ್ಯಾಯಾಲಯ ಕಾನೂನು ರಚಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. 

ಕರಡು ಮಸೂದೆಯಲ್ಲಿ ದಿಢೀರ್‌ ಎಂದು ಮೂರು ಬಾರಿ ತಲಾಕ್‌ ಹೇಳಿ ವಿಚ್ಛೇದನ ನೀಡುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಮೌಖೀಕವಾಗಿ ಮತ್ತು ಲಿಖೀತವಾಗಿ ಮಾತ್ರವಲ್ಲದೆ ವಾಟ್ಸಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಮೆಸೇಜ್‌ ಈ ಮುಂತಾದ ಆಧುನಿಕ ಸಂವಹನ ಮಾಧ್ಯಗಳನ್ನು ಬಳಸಿಕೊಂಡು ಹೇಳುವ ತಲಾಕ್‌ಗಳು ಕಾನೂನಿನ ವ್ಯಾಪ್ತಿಗೆ ಬರುತ್ತದೆ. ಈ ರೀತಿಯ ತಲಾಕ್‌ ಸಂತ್ರಸ್ತ ಮಹಿಳೆಗೆ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಲು ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟಿನಲ್ಲಿ ದಾವೆ ಹೂಡಿ ತನಗೆ ಮತ್ತು ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ಪಡೆದುಕೊಳ್ಳುವ ಅಧಿಕಾರವನ್ನು ಕಾನೂನು ನೀಡಿದೆ. ಗಂಡನಿಗೆ ಗರಿಷ್ಠ ಮೂರು ವರ್ಷಗಳ ತನಕ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು. ದಿಢೀರ್‌ ಆಗಿ ಹೇಳುವ ತ್ರಿವಳಿ ತಲಾಕ್‌ ಶಿಕ್ಷಾರ್ಹ ಜಾಮೀನು ರಹಿತ ಅಪರಾಧ ಎಂದು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ. ಮಸೂದೆಯಲ್ಲಿರುವ ಈ ಅಂಶಗಳು ಸಾಕಷ್ಟು ಕಠಿಣವಾಗಿವೆ. ಕನಿಷ್ಟ ಕಾನೂನಿಗೆ ಹೆದರಿಯಾದರೂ ತ್ರಿವಳಿ ತಲಾಕ್‌ ಹೇಳುವ ಪ್ರವೃತ್ತಿ ನಿಲ್ಲಬಹುದು ಎಂದು ನಿರೀಕ್ಷಿಸಲಾಗಿದೆ. 

ಈ ರೀತಿಯ ಒಂದು ಕಾನೂನು ರಚನೆಯಾಗಲು ಮುಸ್ಲಿಂ ಮಹಿಳೆಯರು ದಶಕಗಳ ಕಾಲ ಕಾನೂನು ಹೋರಾಟ ನಡೆಸಿದ್ದಾರೆ. ಕಳೆದ 70 ವರ್ಷಗಳಲ್ಲಿ ದೇಶವಾಳಿದ ಹಿಂದಿನ ಸರಕಾರಗಳಿಗೆ ಹಲವು ಸಲ ತಲಾಕ್‌ ನಿಷೇಧಿಸುವ ಅವಕಾಶ ಸಿಕ್ಕಿದ್ದರೂ ವೋಟ್‌ಬ್ಯಾಂಕ್‌ ರಾಜಕಾರಣವನ್ನು ಲೆಕ್ಕಹಾಕಿ ಅವುಗಳು ತಲಾಕ್‌ ನಿಷೇಧಿಸುವ ದಿಟ್ಟತನ ತೋರಿಸಿರಲಿಲ್ಲ. ಹೀಗಾಗಿ ಕುರಾನ್‌ನಲ್ಲಿ ಇಲ್ಲದ ಈ ಪದ್ಧತಿ ಧಾರ್ಮಿಕ ನಾಯಕರ ಮರ್ಜಿಗನುಸಾರವಾಗಿ ಅನೂಚಾನವಾಗಿ ಪಾಲನೆಯಾಗುತ್ತಿತ್ತು. ಗಂಡ ಸಿಟ್ಟಿನ ಭರದಲ್ಲೋ ಅಥವ ಬೇರೆ ಯಾವುದೋ ಕಾರಣದಿಂದ ಮೂರು ಸಲ ತಲಾಕ್‌ ಎಂದು ಉಸುರಿದರೆ ಅಲ್ಲಿಗೆ ದಾಂಪತ್ಯ ಮುಗಿದಂತೆ. ಹೆಂಡತಿ ಗಂಟುಮೂಟೆ ಕಟ್ಟಿಕೊಂಡು ಗಂಡನ ಮನೆಯಿಂದ ಹೊರ ನಡೆಯಬೇಕಿತ್ತು. ಅವಳಿಗೆ ಮಕ್ಕಳ ಮೇಲೂ ಅಧಿಕಾರವಿಲ್ಲ, ಆಸ್ತಿಯ ಮೇಲೂ ಅಧಿಕಾರವಿಲ್ಲ. ತವರು ಮನೆಯವರು ಒಳ ಸೇರಿಸಿದರೆ ಆಶ್ರಯ ಸಿಗುತಿತ್ತು. ಇಲ್ಲದಿದ್ದರೆ ಅಕ್ಷರಶಃ ಅನಾಥೆಯಂತೆ ಬಾಳಬೇಕಿತ್ತು. ಪುರುಷ ಪ್ರಧಾನ ವ್ಯವಸ್ಥೆಯ ಈ ಕರಾಳ ಪದ್ಧತಿಯಿಂದಾಗಿ ಎಷ್ಟೋ ಹೆಣ್ಣು ಮಕ್ಕಳು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ಮುಸ್ಲಿಂ ಸಮುದಾಯದ ಬಹುತೇಕ ಜನರು ಇನ್ನೂ ಬಡತನದಲ್ಲಿಯೇ ಇದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಸಾಕ್ಷರತೆಯ ಪ್ರಮಾಣ ತೀರಾ ಕಡಿಮೆಯಿದೆ. ಹೀಗೆ ಅತ್ತ ವಿದ್ಯೆಯೂ ಇಲ್ಲದೆ ಇತ್ತ ಆರ್ಥಿಕ ಆಸರೆಯೂ ಇಲ್ಲದೆ ತಲಾಕ್‌ ಸುಳಿಗೆ ಸಿಲುಕಿ ಅತಂತ್ರರಾಗುತ್ತಿದ್ದ ಸಾವಿರಾರು ಮಹಿಳೆಯರ ಪಾಲಿಗೆ ಈ ಶಾಸನ ಆಪತಾºಂಧವನಾಗಿ ಒದಗಿಬಂದರೆ ಸಾಕು.

Advertisement

Udayavani is now on Telegram. Click here to join our channel and stay updated with the latest news.

Next