ಬೆಂಗಳೂರು: ವಸತಿ ಸಮುತ್ಛಯ ಹಾಗೂ ಬಹುಮಹಡಿ ಕಟ್ಟಡಗಳ ಕಾಮಗಾರಿ ವೇಳೆ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸಿಕೊಳ್ಳವಂತೆ ಕಾನೂನು ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಲ್ಲೇಶ್ವರದಲ್ಲಿ ನೂತನವಾಗಿ 25.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಜಲಮಂಡಳಿಯ ಸುವರ್ಣ ಭವನ ಉದ್ಘಾಟಿಸಿ ಮಾತನಾಡಿ ಅವರು. ಬೆಂಗಳೂರು ಸಾಖಷ್ಟು ಬೆಳೆಯುತ್ತಿದ್ದು, ಜನಸಂಖ್ಯೆಯು ದಿನೇದಿನೆ ಏರಿಕೆಯಾಗಿ ನೀರಿನ ಬವಣೆ ಹೆಚ್ಚಾಗಿದೆ.
ಹೀಗಾಗಿ, ನೀರಿನ ಮರುಬಳಕೆ ಹಾಗೂ ಮಳೆ ನೀರು ಸಂಗ್ರಹಣೆಯ ಅಗತ್ಯತೆ ಹೆಚ್ಚಿದೆ. ಇದಕ್ಕಾಗಿ ನಗರದ ವಸತಿ ಸಮುತ್ಛಯಗಳಿಗೆ ಕಾನೂನು ರೂಪಿಸಿ ಎಸ್‌ಟಿಪಿ ಹಾಗೂ ಮಳೆನೀರು ಕೋಯ್ಲುನ್ನು ನಿರ್ಮಾಣ ಹಂತದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
2050 ರೊಳಗೆ 3.5 ಕೋಟಿ ಜನಸಂಖ್ಯೆ ಆಗಲಿದೆ. ಈ ಎಲ್ಲರಿಗೂ ನೀರು ಪೂರೈಕೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ನಗರಕ್ಕೆ ಕಾವೇರಿ ಬಿಟ್ಟರೆ ಬೇರೆ ಯಾವ ಮೂಲವೂ ಇಲ್ಲ. ಪ್ರಸ್ತುತ 5,500 ಕೋಟಿ ರೂ. ವೆಚ್ಚದಲ್ಲಿ 5ನೇ ಹಂತದ ಕಾವೇರಿ ನೀರು ತರಲಾಗುತ್ತಿದೆ.
ತಿಪ್ಪಗೊಂಡನಹಳ್ಳಿ ಜಲಾಶಯವನ್ನು 340 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನ ಮಾಡಲಾಗುತ್ತಿದೆ. ಜತೆಗೆ 1,300 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಇವುಗಳ ಹೊರತಾಗಿಯೂ ಲಿಂಗನಮಕ್ಕಿ ಜಲಾಶಯದಿಂದ ನೀರು ತರಲು ಡಿಪಿಆರ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಅಲ್ಲಿಂದ ಕನಿಷ್ಠ 10 ಟಿಎಂಸಿ ನೀರು ದೊರೆಯುವ ನಿರೀಕ್ಷೆ ಇದೆ ಎಂದರು. ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ, ಶಾಸಕ ಅಶ್ವತ್ಥನಾರಾಯಣ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಪ್ರಧಾನ ಮುಖ್ಯ ಇಂಜಿನಿಯರ್ ಕೆಂಪರಾಮಯ್ಯ ಉಪಸ್ಥಿತರಿದ್ದರು.