ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮೋಂತಿಮಾರಿನಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರನ್ನು ಕಂಡು ತಪ್ಪಿಸಲು ಯತ್ನಿಸಿದ ವಾಹನವನ್ನು ಬೆನ್ನಟ್ಟಿ ಹಿಡಿದ ಪೊಲೀಸರು ಓರ್ವ ಆರೋಪಿ ಸೇರಿದಂತೆ ಮೂರು ದನಕರುಗಳು ಸಹಿತ ಒಟ್ಟು 1.59 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯಲ್ಲಿ ಆರೋಪಿ ಗೂಡ್ಸ್ ವಾಹನ ಚಾಲಕ ಅಬ್ದುಲ್ ಹಮೀದ್(37)ನನ್ನು ಬಂಧಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಮತ್ತೋರ್ವ ಆರೋಪಿ ಅಬ್ಟಾಸ್ ಮೂಲೆಮನೆ ತಪ್ಪಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಜಾನುವಾರು ಸಾಗಾಟ ಹಾಗೂ ಮನೆ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಜು. 24ರ ಮುಂಜಾನೆ 5.45ರ ವೇಳೆಗೆ ಪಿಎಸ್‌ಐ ಹರೀಶ್ ಎಂ.ಆರ್. ಹಾಗೂ ಸಿಬಂದಿ ರೌಂಡ್ಸ್ ಕರ್ತವ್ಯದ ಹಿನ್ನೆಲೆ ಮೋಂತಿಮಾರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಮಂಚಿಕಟ್ಟೆ ಭಾಗದಿಂದ ಗೂಡ್ಸ್ ವಾಹನವೊಂದು ಆಗಮಿಸಿದ್ದು, ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ಚಾಲಕ ನಿಲ್ಲಿಸದೆ ಮುಂದಕ್ಕೆ ಹೋಗಿದ್ದಾನೆ.
ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು ಗೂಡ್ಸ್ ವಾಹನವನ್ನು ಬೆನ್ನಟ್ಟಿ 500 ಮೀ. ದೂರದಲ್ಲಿ ಅಡ್ಡ ಗಟ್ಟಿ ನಿಲ್ಲಿಸಿದ್ದು, ಆಗ ಓರ್ವ ಓಡಿ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಚಾಲಕನನ್ನು ಹಿಡಿದು ವಿಚಾರಿಸಿದಾಗ ಅಕ್ರಮ ಗೋಸಾಗಾಟ ಬೆಳಕಿಗೆ ಬಂದಿದೆ. ವಾಹನದೊಳಗೆ ನೋಡಿದಾಗ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿದ್ದರು.
ಪೊಲೀಸರು 9 ಸಾವಿರ ರೂ.ಮೌಲ್ಯದ ಜಾನುವಾರುಗಳು ಸೇರಿದಂತೆ 1.50 ಲಕ್ಷ ರೂ.ಮೌಲ್ಯದ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಮತ್ತೋರ್ವ ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.