ಕೆ.ಆರ್.ಪೇಟೆ: ಕೆಆರ್‌ಎಸ್ ಹಾಗೂ ಹೇಮಾವತಿ ನದಿ ಬಯಲಿನಲ್ಲಿ ಬೆಳೆದಿರುವ ಕಬ್ಬು ಬೆಳೆ ಉಳಿಸಿಕೊಳ್ಳಲು ನೀರು ಬಿಡುವಂತೆ ಒತ್ತಾಯಿಸಿ ಜು.6ರಂದು ಪಟ್ಟಣದ ತಾಲೂಕು ಕಚೇರಿಗೆ ಸಾವಿರಾರು ರೈತರು ಜಾನುವಾರುಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜಿಲ್ಲಾ ರೈತ ಸಂಘದ ಹಿರಿಯ ರೈತ ಮುಖಂಡ ಮುದುಗೆರೆ ರಾಜೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಿದ ರಾಜ್ಯ ಸರ್ಕಾರ ಈಗ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಮಗ ಸೋತ ಕೂಡಲೇ ನೀರು ಬಿಡುಗಡೆ ಮಾಡುವ ಬದಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದತ್ತ ಕೈ ತೋರಿಸುತ್ತಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಆರೋಪಿಸಿದರು.
ಅಹೋರಾತ್ರಿ ಧರಣಿಗೆ ಬಗ್ಗದ ಸರ್ಕಾರ: ನೀರು ಬಿಡುಗಡೆಗೆ ಒತ್ತಾಯಿಸಿ ಶಾಂತಿಯುತವಾಗಿ ಒಂದು ವಾರ ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿದರೂ ಜಿಲ್ಲೆಯ ಮಂತ್ರಿಗಳಾಗಲಿ, ಶಾಸಕರಾಗಲಿ ಯಾರೊಬ್ಬರೂ ಅತ್ತ ಗಮನಹರಿಸಲಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸಲಿಲ್ಲ. ಹಾಗಾಗಿ ಜು.6ರಂದು ಕಾನೂನು ಭಂಗ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಅಂದು ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳ ಮುಂದೆ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಾನುವಾರು, ಸಾಕು ಪ್ರಾಣಿ, ಹಾವು ಹಲ್ಲಿ, ನಾಯಿ, ಬೆಕ್ಕುಗಳೊಂದಿಗೆ ಮುತ್ತಿಗೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಆಹಾರ ಪೂರೈಸಿ: ಸರ್ಕಾರ ಬಂಧಿಸುವುದಾದರೆ ಜಾನುವಾರು, ಸಾಕು ಪ್ರಾಣಿಗಳೊಂದಿಗೆ ನಮ್ಮನ್ನೂ ಬಂಧಿಸಲಿ. ಇಲ್ಲ ಒಣಗುತ್ತಿರುವ ಬೆಳೆಗಳಿಗೆ ನೀರು ಬಿಡಲಿ. ಜೊತೆಗೆ ನಮ್ಮ ಜಾನುವಾರುಗಳಿಗೆ ಸರ್ಕಾರವೇ ಆಹಾರ ನೀಡಿ ಸಾಕಲಿ ಎಂದು ಸರ್ಕಾರಕ್ಕೆ ರಾಜೇಗೌಡರು ಸವಾಲು ಹಾಕಿದರು.
ಸಭೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಮುರುವನಹಳ್ಳಿ ಶಂಕರ್, ರೈತ ಮುಖಂಡರಾದ ಜಗದೀಶ್, ಮುದ್ದುಕುಮಾರ್, ಬೂಕನಕೆರೆ ನಾಗರಾಜು, ಕಾರಿಗನಹಳ್ಳಿ ಪುಟ್ಟೇಗೌಡ, ನೀತಿಮಂಗಲ ಮಹೇಶ್, ಕರೋಠಿ ತಮ್ಮಯ್ಯ, ಮಿಲ್ರಾಜಣ್ಣ, ಮಾಕವಳ್ಳಿ ರವಿ, ಕೃಷ್ಣೇಗೌಡ, ಮೂರ್ತಿ, ರೈತ ಸಂಘದ ಮಹಿಳಾ ಘಟಕದ ಲತಾಕೇಶವ್, ರೂಪಾ, ಯೋಗಮ್ಮ, ಲಕ್ಷ್ಮಮ್ಮ, ಯಶೋಧಮ್ಮ, ತಾಯಮ್ಮ ಮತ್ತಿತರರು ಭಾಗವಹಿಸಿದ್ದರು.