ಹಾವೇರಿ: ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಪ್ರತಿದಿನ ಕಾನೂನಿನ ಜಾಗೃತಿ ಅವಶ್ಯ. ಕಾನೂನಿನ ಬಗ್ಗೆ ಹೆಚ್ಚು ತಿಳಿದುಕೊಂಡವರು ಕಡಿಮೆ ತಿಳಿದುಕೊಂಡುವರಿಗೆ ತಿಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಎಚ್. ರೇಣುಕಾದೇವಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜಕರ ಇಲಾಖೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಧೀಶರು, ವಕೀಲರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹೊಸದಾಗಿ ಜಾರಿಯಾದ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ವ್ಯಾಜ್ಯಗಾರರಿಗೂ ಸಹ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಬೇಕು. ಜಾಮೀನು ಪ್ರಕರಣ, ಭದ್ರತೆ ಹಾಗೂ ಇನ್ನಿತರ ಕೆಲವು ಪ್ರಕರಣಗಳಲ್ಲಿ ವ್ಯಾಜ್ಯಗಾರರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ಇರುವುದಿಲ್ಲ. ನಾನು ಯಾಕೆ ಹಣ ಭರಿಸಬೇಕು ಎಂದು ಪ್ರಶ್ನಿಸುತ್ತಾರೆ. ಕಾರಣ ವ್ಯಾಜ್ಯಗಾರರಿಗೂ ಸಹ ಕಾನೂನಿನ ಜಾಗೃತಿ ಅತ್ಯವಶ್ಯವಾಗಿದೆ. ಪ್ರಾಥಮಿಕ ಹಂತದಲ್ಲೇ ವ್ಯಾಜ್ಯಗಳನ್ನು ಬಗೆಹರಿಸುವ ಕೆಲಸವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ. ಜಗದೀಶ ಮಾತನಾಡಿ, ನ್ಯಾಯಾಂಗ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಾನೂನು ಮತ್ತು ಮಾನವೀಯತೆ ಆಧಾರದಲ್ಲಿ ಕರ್ತವ್ಯನಿರ್ವಸಬೇಕಾಗುತ್ತದೆ. ಆದರೆ, ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಮಾನವೀಯತೆ ದೊಡ್ಡದಾಗಿರುತ್ತದೆ. ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸವನ್ನು ನಾವೆಲ್ಲರೂ ನ್ಯಾಯಯುತವಾಗಿ ಮಾಡೋಣ ಎಂದರು. ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೈ. ಎಲ್. ಲಾಡಖಾನ್ ಪ್ರಾಸ್ತಾವಿಕ ಮಾತನಾಡಿ, ಹಣಕಾಸಿನ ತೊಂದರೆ ಇತರ ಕಾರಣಗಳಿಗಾಗಿ ಸಮಾಜದ ಯಾವ ವ್ಯಕ್ತಿಯೂ ನ್ಯಾಯದಿಂದ ವಂಚಿತವಾಗಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ಆಶಯದಿಂದ ಎಲ್ಲರಿಗೂ ಉಚಿತವಾಗಿ ಕಾನೂನಿನ ನೆರವು ಒದಗಿಸಲಾಗುತ್ತಿದೆ. ಎಲ್ಲರೂ ಕಾನೂನನ್ನು ಗೌರವಿಸೋಣ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾದ ರಾಜೇಶ್ವರಿ ಚಕ್ಕಲೇರ, ರಾಷ್ಟ್ರೀಯ ಕಾನೂನು ಸೇವೆಗಳ ಕಾಯ್ದೆ-1987ರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕೆ.ಸಿ.ಸದಾನಂದಗೌಡ, ಅಣ್ಣುಗೌಡ ಪಾಟೀಲ, ಶ್ರೀದೇವಿ ದರ್ಬಾರೆ, ಅಪರ ಜಿಲ್ಲಾ ಧಿಕಾರಿ ವಿನೋದ ಹೆಗ್ಗಳಗಿ, ಎಸ್.ಪಿ.ಕಚೇರಿ ಅಭಿಯೋಜಕರು ಹಾಗೂ ಕಾನೂನು ಅಧಿಕಾರಿ ವಿ.ಎಸ್. ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದರ್ಶಿ ಪಿ.ಎಂ.ಬೆನ್ನೂರ ಇತರರು ಇದ್ದರು. ಸುದರ್ಶನ ಕುಲಕರ್ಣಿ ಸ್ವಾಗತಿಸಿದರು.
23ನೇ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಜಾಗೃತಿ ಕಾರ್ಯಕ್ರಮವನ್ನು ನ. 19ರ ವರೆಗೆ ಹಮ್ಮಿಕೊಳ್ಳಲಾಗಿದೆ. ಮನೆ ಮನೆ ಭೇಟಿ ಮೂಲಕ ಕಾನೂನು ಜಾಗೃತಿ ಮೂಡಿಸುವ ಕಾರ್ಯಕ್ರಮ ಸೇರಿದಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವೈ.ಎಲ್. ಲಾಡಖಾನ್, ನ್ಯಾಯಾಧೀಶರು